ಶಿವಮೊಗ್ಗ : ಶ್ರೀ ಗುರು ಶಾಂತವೀರೇಶ್ವರ ಸೇವಾ ಸಮಿತಿಯ ರಜತ ಮಹೋತ್ಸವದ ಅಂಗವಾಗಿ ಆಗಸ್ಟ್ ೧೭ರಂದು ಸಂಜೆ ೫ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್. ಮಹಾಲಿಂಗಯ್ಯ ಶಾಸ್ತ್ರೀ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಶೈವ-ಲಿಂಗಾಯಿತ ವಧು-ವರರ ಅನ್ವೇಷಣಾ ಕೇಂದ್ರವು ಸ್ಥಾಪನೆಯಾಗಿ ೨೫ ವರ್ಷಗಳು ತುಂಬಿವೆ. ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಅಂದು ನೂತನ ಹಿಂದೂ ವಧು-ವರರ ಅನ್ವೇಷಣಾ ಕೇಂದ್ರದ ವೆಬ್ಸೈಟ್ ಬಿಡುಗಡೆ, ಯಾತ್ರಾ ಕೈಪಿಡಿ ಬಿಡುಗಡೆ, ಪ್ರತಿಭಾ ಪುರಸ್ಕಾರ ಮತ್ತು ಶ್ರೀ ಬೆಕ್ಕಿನ ಕಲ್ಮಠ ಶ್ರಾವಣ ಚಿಂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಈ ಕಾರ್ಯಕ್ರಮದ ಸಾನಿಧ್ಯವನ್ನು ಬೆಕ್ಕಿನ ಕಲ್ಮಠ ಶ್ರೀಗಳಾದ ಡಾ|| ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿ, ಕಾಗಿನೆಲೆ ಗುರುಪೀಠದ ಈಶ್ವರಾನಂದ ಪುರಿ ಸ್ವಾಮಿ, ಆದಿಚುಂಚನಗಿರಿ ಮಠದ ಸಾಯಿನಾಥ ಸ್ವಾಮಿ ವಹಿಸುವರು. ಉದ್ಘಾಟನೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೆರವೇರಿಸುವರು. ರಜತ ಸಂಭ್ರಮ ಕೈಪಿಡಿಯನ್ನು ಸಂಸದ ಬಿ.ವೈ. ರಾಘವೇಂದ್ರ ಬಿಡುಗಡೆ ಮಾಡುವರು ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ಡಾ|| ಧನಂಜಯ ಸರ್ಜಿ, ಡಿ.ಎಸ್. ಅರುಣ್, ಮಾಜಿ ಶಾಸಕರಾದ ಎಸ್. ರುದ್ರೇಗೌಡರು, ಆಯನೂರು ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಆರ್ಎಸ್ಎಸ್ ಮುಖಂಡ ಪಟ್ಟಾಭಿರಾಮ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ. ಯೋಗೀಶ್ ಹಾಗೂ ವೀರಶೈವ ಸಮಾಜದ ಮುಖಂಡ ಎಸ್.ಎಸ್. ಜ್ಯೋತಿಪ್ರಕಾಶ್, ಉಪಸ್ಥಿತರಿರುವರು ಎಂದರು.
ಇವರ ಜೊತೆಗೆ ಪ್ರಮುಖರಾದ ಎಸ್.ಪಿ. ದಿನೇಶ್, ಹೆಚ್.ವಿ. ಮಹೇಶ್ವರಪ್ಪ, ಟಿ.ವಿ. ಈಶ್ವರಯ್ಯ, ವಿರುಪಾಕ್ಷಪ್ಪ ಜವಳಿ, ಎನ್.ಡಿ. ವಿದ್ಯಾಧರ, ಬಳ್ಳೇಕೆರೆ ಸಂತೋಷ್, ಈ. ವಿಶ್ವಾಸ್, ಎಂ.ಜೆ. ವಿರುಪಾಕ್ಷಯ್ಯ ಶಾಸ್ತ್ರೀ, ಚಂದ್ರಯ್ಯ ಎ.ಎಂ. ಇರುವರು ಮತ್ತು ಹಲವು ಸಂಘ-ಸಂಸ್ಥೆಗಳು ಇದಕ್ಕೆ ಸಹಕಾರ ನೀಡಲಿವೆ ಎಂದರು.

ರಜತ ಮಹೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಲಾಗಿದೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.೯೫ಕ್ಕಿಂತ ಹೆಚ್ಚು ಅಂಕಗಳಿಸಿದ ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇವರು ಆ.೧೪ರೊಳಗೆ ಸಂಜೆ ೫ ಗಂಟೆಯೊಳಗೆ ದೃಢೀಕೃತ ಅಂಕಪಟ್ಟಿ ಹಾಗೂ ಆಧಾರ್ಕಾರ್ಡನ್ನು ಕಳುಹಿಸಬೇಕು. ಇದಕ್ಕೆ ದೂರವಾಣಿ : ೮೭೬೨೪೬೦೧೩೦ಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ರಜತ ಸಂಭ್ರಮದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಡಾ|| ವೈ.ಬಿ. ಪ್ರಭುದೇವ್ ತಿಳಿಸಿದರು. ಈ ಶಿಬಿರದಲ್ಲಿ ಬೆನ್ನು ನೋವು, ಭುಜದ ನೋವು, ಮಂಡಿನೋವು ಮುಂತಾದವುಗಳಿಗೆ ತಪಾಸಣೆ ಮಾಡಲಾಗುವುದು. ಇದಕ್ಕೆ ಬೇಕಾದ ಆಯುರ್ವೇದ ಚಿಕಿತ್ಸೆಯ ಬಗ್ಗೆ ಸಲಹೆ ನೀಡಲಾಗುವುದು. ಶಿಬಿರವು ಅಂದು ಮಧ್ಯಾಹ್ನ ೩ ಗಂಟೆಗೆ ಕುವೆಂಪು ರಂಗಮಂದಿರದಲ್ಲಿಯೇ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ. ವಿಶ್ವಾಸ್, ಹನುಮೇಗೌಡರು, ಕಾಂತ್ರಾಜ್, ಶಾಂತವೀರಯ್ಯ, ಚನ್ನಬಸಪ್ಪ, ಲೋಕೇಶ್, ಕರಿಬಸಪ್ಪ, ವೀರಭದ್ರಸ್ವಾಮಿ ಮುಂತಾದವರಿದ್ದರು.