ಶಿವಮೊಗ್ಗ : ಮುಂಬರುವ ಗೌರಿ- ಗಣೇಶ ಹಬ್ಬದ ಅಂಗವಾಗಿ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ಇಂದು ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಆಯೋಜಕರಿಗೆ ಕೆಲವು ಸೂಚನೆಗಳನ್ನು ನೀಡಿದರು.
ಗಣಪತಿ ಪೆಂಡಲ್ ನಿರ್ಮಾಣದ ವೇಳೆ ಸಾರ್ವಜನಿಕ ಹಿತದೃಷ್ಠಿ ಹಾಗೂ ಸುರಕ್ಷತಾ ದೃಷ್ಠಿಯಿಂದ ಸಿಸಿ ಕ್ಯಾಮರಗಳನ್ನು ಅಳವಡಿಸುವ ಜೊತೆಗೆ ಬ್ಯಾನರ್ ಮತ್ತು ಫ್ಲೆಕ್ಸ್ ಗಳಿಗೆ ಅನುಮತಿ ನೀಡುವಾಗ ಅನುಸರಿಸಬೇಕಾದ ಮಾರ್ಗ ಸೂಚನೆಗಳನ್ನು ಸೂಚಿಸಿದರು.
ಫ್ಲೆಕ್ಸ್ ಮತ್ತು ಬ್ಯಾನರ್ ಗಳಲ್ಲಿ ಯಾವುದೇ ಕಾರಣಕ್ಕೂ ಇತರ ಭಾವನೆಗಳಿಗೆ ದಕ್ಕೆಯಾಗುವಂತಹ ಮತ್ತು ಆಕ್ಷೇಪಾರ್ಹ ಮಾಹಿತಿ / ಚಿತ್ರಗಳನ್ನು ಪ್ರಿಂಟ್ ಮಾಡಸಬೇಡಿ ಎಂದು ಹೇಳಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಯಾವುದೇ ರೀತಿಯ ಅಪರಾಧಗಳು ನಡೆಯದಂತೆ ಗಮನಹರಿಸಬೇಕು. ಮೆರವಣಿಗೆ ಸಮಯದಲ್ಲಿ ಯಾವುದೇ ಅಪರಾಧಗಳು ನಡೆದರೆ ಆಯೋಜಕರೆ ಜವಾಬ್ದಾರರಾಗಿರುತ್ತಾರೆ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಯಾವುದೇ ಕಾರಣಕ್ಕೂ ಡಿಜೆ ಸಿಸ್ಟಮ್ ಬಳಸಬೇಡಿ ಎಂದು ಆಯೋಜಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿನೋಬನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಅರುಣ್, ಆಕಾಶ್, ರುದ್ರೇಶ್, ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಯೋಜಕರು ಉಪಸ್ಥಿತರಿದ್ದರು.