ಸಾಗರ, ಆ.೬- ರೈತರು ಹೊಲದಲ್ಲಿ ಭತ್ತದ ನಾಟಿ ಮಾಡಿ ಬೆಳೆ ತೆಗೆಯುವುದು ಎಲ್ಲರಿಗೂ ಗೊತ್ತು. ಆದರೆ ಶಾಲಾ ಮಕ್ಕಳು, ಶಿಕ್ಷಕರು ಗದ್ದೆಗಿಳಿದು ರೈತರೊಂದಿಗೆ ಭತ್ತದ ನಾಟಿ ಮಾಡಿದರು ಎಂದರೆ ಹೌದಾ ಎಂದು ಕೇಳಬೇಕಾಗುತ್ತದೆ.

ನಿಜ, ತಾಲ್ಲೂಕಿನ ಮಾಲ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಮಾಲತೇಶಪ್ಪ ಮತ್ತು ಶಿಕ್ಷಕರು ಶಾಲಾ ಮಕ್ಕಳನ್ನು ಮಂಗಳವಾರ ಶಾಲೆ ಸಮೀಪದ ಕೃಷಿಕ ನಾರಾಯಣಪ್ಪ ಅವರ ಗದ್ದೆಗೆ ಕರೆದುಕೊಂಡು ಹೋಗಿ ಅಲ್ಲಿನ ರೈತರಾದ ಹರೀಶ್, ಗಂಗಾಧರ, ರೇಣುಕಾ, ಸರಸ್ವತಿ, ರೇಣುಕಾ, ನೇತ್ರಾವತಿ, ರತ್ನಾ ಅವರೆಲ್ಲ ನಾಟಿ ಮಾಡುವುದನ್ನು ನೋಡಿದರಲ್ಲದೇ ಮಕ್ಕಳೂ ಕೆಸರು ಗದ್ದೆಯಲ್ಲಿ ನಾಟಿ ಮಾಡಿ ಹೊಸ ಅನುಭವಕ್ಕೆ ಸಾಕ್ಷಿಯಾದರು.

ಗದ್ದೆಯಲ್ಲಿ ಭತ್ತವನ್ನು ಹೇಗೆ ಬೆಳೆಯುತ್ತಾರೆ. ಎಷ್ಟು ಅವಧಿಯಲ್ಲಿ ಇದು ಬೆಳೆಯಾಗುತ್ತದೆ. ಮುಂದೆ ಅದು ಆಹಾರವಾಗಿ ಅಕ್ಕಿಯಾಗಿ ಹೇಗೆ ಪರಿವರ್ತನೆಯಾಗುತ್ತದೆ. ದೇಶದಲ್ಲಿ ರೈತನ ಮಹತ್ವ ಎಂಥದಿದೆ ಇತ್ಯಾದಿ ಮಾಹಿತಿಯನ್ನು ಮಕ್ಕಳಿಗೆ ತಿಳಿಸಲಾಯಿತು.


ನಾಲ್ಕು ಗೋಡೆಯ ನಡುವಿನ ಪಾಠ ಕೇಳಿದುದಕ್ಕಿಂತ ಇದು ಹೊಸ ಅನುಭವ ನೀಡಿತು. ಕೇಳಿದ ಪಾಠವನ್ನು ಸ್ವತ: ಪ್ರಯೋಗದ ಮೂಲಕ ಪರಿಚಯ ಮಾಡಿಕೊಟ್ಟಿರುವುದು ಶಿಕ್ಷಕರ ಸೃಜನಶೀಲತೆಗೆ ಸಾಕ್ಷಿಯಾಗಿತ್ತು. ನಮ್ಮ ಶಾಲೆಯ ೧ ರಿಂದ ೫ ನೇ ತರಗತಿಯವರೆಗಿನ ಮಕ್ಕಳಿಗೆ ‘ಪರಿಸರ ಅಧ್ಯಯನ’ ಎಂಬ ಒಂದು ವಿಷಯ ಇದೆ. ೬ ನೇ ತರಗತಿ ಮಕ್ಕಳಿಗೆ ‘ನಾಟಿ ಮಾಡುವ’ ಕುರಿತು ಒಂದು ಪಾಠ ಇದೆ. ಹಾಗಾಗಿ ೭ ನೇ ತರಗತಿಯವರೆಗಿನ ಮಕ್ಕಳನ್ನು ನಾಟಿ ಮಾಡುವ ಗದ್ದೆಗೆ ಅತ್ಯಂತ ಮುತುವರ್ಜಿಯಿಂದ ಕರೆದುಕೊಂಡು ಹೋಗಿದ್ದೆವು.

ಶಿಕ್ಷಕಿಯರಾದ ಸುಮಾ, ಅಮೃತಾ, ಚೇತನಾ, ಅನ್ನಪೂರ್ಣ ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಮಕ್ಕಳು ತುಂಬ ಸಂತಸ, ಸಂಭ್ರಮ ಪಟ್ಟರು. ಈ ಸಂದರ್ಭದಲ್ಲಿ ಮಳೆ ಬಿಡುವು ಕೊಟ್ಟಿದ್ದರಿಂದ ಮಕ್ಕಳು ಗದ್ದೆಯಲ್ಲಿ ನಾಟಿ ಮಾಡುವ ಸಂಪೂರ್ಣ ಕಾರ್ಯವನ್ನು ವೀಕ್ಷಿಸಲು ಹಾಗೂ ತಾವೇ ತೊಡಗಿಕೊಳ್ಳಲು ಸಾಧ್ಯವಾಯಿತು. ನಾನು, ಶಿಕ್ಷಕಿಯರು ಹಾಗೂ ಮಕ್ಕಳೂ ಗದ್ದೆಯಲ್ಲಿ ನಾಟಿ ಮಾಡಿ ಖುಷಿ ಪಟ್ಟೆವು ಎಂದು ಶಾಲಾ ಮುಖ್ಯ ಶಿಕ್ಷಕರು ಹಾಗೂ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಆಗಿರುವ ಮಾಲತೇಶಪ್ಪ ತಿಳಿಸಿದರು.