ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 58
ಗಜೇಂದ್ರ ಸ್ವಾಮಿ ಎಸ್. ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಈ ಸಮಾಜದಲ್ಲಿ ಎಲ್ಲ ಬಗೆಯ ಜನರನ್ನ ನೋಡಿದ್ದೇವೆ. ಅವರೊಂದಿಗೆ ಬೆರೆತಿದ್ದೇವೆ ಎಷ್ಟು ಬೇಕೋ ಅಷ್ಟಷ್ಟು ಎನ್ನುವಂತೆ ಹತ್ತಿರವಿದ್ದೇವೆ, ದೂರವಿದ್ದೇವೆ. ಇದೊಂದು ವಿಚಿತ್ರ ಪ್ರಪಂಚ ಎಂದರೆ ತಪ್ಪಾಗಲಿಕ್ಕಿಲ್ಲ. ಅತ್ಯಂತ ವಿಭಿನ್ನಗಳಲ್ಲಿ ಕೆಲವೇ ಕೆಲವರ ಆಸೆ ದುರಾಸೆಯಾಗಿ ಎಷ್ಟೇ ಕೂಡಿಟ್ಟರೂ ಜಿಗಣೆಯಂತಹ ಜಿಪುಣರಾಗಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ.
ಎಷ್ಟೇ ಇದ್ದರೂ ಅದು ಇಲ್ಲ ಎಂದು ಇನ್ನೊಬ್ಬರ ಜೊತೆಗೆ ನೆರವು ಪಡೆಯುತ್ತದೆ ಕೂಡಿಡುವ ಅದನ್ನು ಕಟ್ಟಿಡುವ ಬುದ್ದಿ ಕೆಲವರಲ್ಲಿ ಹೆಚ್ಚಾಗಿರುವುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಜನುಮದ ದಿನಾಂಕವನ್ನು ನಿಗದಿಯಾಗಿ ಹೇಳಬಹುದು ಆದರೆ ಸಾವನ್ನು ಸ್ಪಷ್ಟವಾಗಿ ಯಾರು ನಿರ್ಧರಿಸಲು ಸಾಧ್ಯವಿಲ್ಲ, ಹಾಗೆ ಸಾಯುವುದು ಖಚಿತ ಎಂಬುದು ಎಲ್ಲರಿಗೂ ಗೊತ್ತಿರುತ್ತದೆ.
ಆದರೂ ಅತಿಯಾದ ದುರಾಸೆ ಮತ್ತು ಕೂಡಿಡುವ ಕಟ್ಟಿಡುವ ಮುಂದಿನ ಹತ್ತಾರು ತಲೆಮಾರುಗಳು ಹಿಂದರೂ ಕರಗದಷ್ಟು ಆಸ್ತಿ ಮಾಡಿರುವ ಮನೋಭಾವ ಕಂಡುಬರುತ್ತದೆ ಎಷ್ಟೇ ಇದ್ದರೂ ಅದನ್ನು ಹಂಚದೆ ಕಟ್ಟಿಡುವ ಬಚ್ಚಿಡುವ ವ್ಯಕ್ತಿಗಳಿಗೆ ಸತ್ತಾಗ ತೆಗೆದುಕೊಂಡು ಹೋಗುವುದಿಲ್ಲ ಎಂದು ಗೊತ್ತಿದ್ದರೂ ಒಂದಿಷ್ಟು ನೈಜ ಸಹಜ ಉದಾರತೆ ದಾನ ಮಾಡುವ ಸದ್ಗುಣ ಬೆಳೆಯದಿರುವುದು ದುರಂತ ಹೌದಲ್ಲವೇ?
ಹಾಗೆಂದ ಮಾತ್ರಕ್ಕೆ ಸಂಪೂರ್ಣ ಕಳೆದುಕೊಳ್ಳುವಷ್ಟನ್ನು ಕೊಡುವುದು ಅತ್ಯಂತ ದೊಡ್ಡ ದಾನ ಶೂರ ಕರ್ಣ ಅಂತಾಗುವುದು ತಪ್ಪು ಆದರೆ ಇದ್ದದ್ದರಲ್ಲಿ ಒಂದಷ್ಟು ಹಂಚಿ ತಿಂದರೆ ಆಗುವ ಸಮಾಧಾನ ಮಾನಸಿಕ ನೆಮ್ಮದಿ ನಿಜವಾಗಿಯೂ ಅತ್ಯಂತ ವಿಶೇಷವೇ ಹೌದು ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಮಾತು ಎಷ್ಟೊಂದು ಅರ್ಥಪೂರ್ಣವಲ್ಲವೇ?

ಪ್ರಪಂಚದಲ್ಲಿ ಪ್ರತಿಯೊಬ್ಬನು ಹಣವನ್ನಾಗಲಿ, ವಸ್ತು ಆಸ್ತಿಯನ್ನಾಗಲಿ ಗಳಿಸಲು ಇಷ್ಟಪಡುತ್ತಾನೆ. ಅದನ್ನು ಉಳಿಸಲು ಪ್ರಯತ್ನಿಸುತ್ತಾನೆ. ಆದರೆ ಅದನ್ನು ಬಳಸುವಾಗ ಸ್ವಾರ್ಥಿಯಾಗಿ ಎಲ್ಲವನ್ನು ತನ್ನ ಸುಖಕ್ಕೆ ಬಳಸಲು ಇಚ್ಛಿಸುತ್ತಾನೆ. ಇದು ಮಾನವನ ಸ್ವಭಾವ. ಆದರೆ ಮನುಷ್ಯರು ಹಾಗೆ ಬದುಕಬಾರದು. ದಾನದ ಗುಣವಿಲ್ಲದವನು ಜಿಪುಣನೆನಿಸುತ್ತಾನೆ, ಸ್ವಾರ್ಥಿಯಾಗುತ್ತಾನೆ. ಎಲ್ಲವೂ ತನಗೆ ಬೇಕು ಎನ್ನುತ್ತಾನೆ.
ದುರಾಸೆ ಹೆಚ್ಚುತ್ತದೆ. ಲೋಭಿಯಾಗಿ ಸ್ವಾರ್ಥಿಯಾಗಿ ಜಿಪುಣನಾಗಿ ಬಾಳುವ ಬದಲು ತನ್ನ ಪಾಲಿಗೆ ಬಂದದ್ದನ್ನು ಪರಮಾನ್ನವೆಂದು ತಿಳಿದು ಅದರಲ್ಲಿ ಸಾಧ್ಯವಾದಷ್ಟನ್ನು, ದಾನ ಧರ್ಮ ಮಾಡಿ, ಇತರರ ಕಷ್ಟಗಳಿಗೆ ನೆರವಾದರೆ ದೇವರಿಗೆ ಪ್ರೀತಿಯಾಗುತ್ತದೆ. ಇತರರಿಗೆ ಕಷ್ಟ ಪರಿಹಾರವಾಗುತ್ತದೆ. ಈ ರೀತಿ ಪರೋಪಕಾರಿ ಮಾಡಿದರೆ ಅದರ ಪ್ರತಿ ಫಲ ಇದ್ದೇ ಇರುತ್ತದೆ. ಇಲ್ಲಿ ನಮ್ಮ ಸಂಸ್ಕೃತಿ ದಾನದ ಶ್ರೇಷ್ಠತೆಯನ್ನು ಹೇಳಿದೆ.

ಇಲ್ಲೊಂದು ರಾಘವೇಂದ್ರರಾಯರ ಹಾಡು ನೆನಪಾಗುತ್ತದೆ. ಮುನ್ನಾ ಮಾಡಿದ ಪಾಪ ಯಾರ ತಾತನ ಗಂಟು ಎಂಬ ಹಾಡನ್ನೊಮ್ಮೆ, ಅದರ ಸಾಹಿತ್ಯವನ್ನೊಮ್ಮೆ ಅವಲೋಕಿಸಿ.
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು, ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ, ರಾಘವೇಂದ್ರ
ಮುಳ್ಳಲ್ಲಾದರು ನೂಕು ಕಲ್ಲಲ್ಲಾದರು ನೂಕು, ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ, ರಾಘವೇಂದ್ರ
ಬಿಸಿಲಲ್ಲೆ ಒಣಗಿಸು ನೆರಳಲ್ಲೆ ಮಲಗಿಸು, ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತ ಇರುವೆ, ರಾಘವೇಂದ್ರ
ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು, ನೀನೇ ಹೇಳು, ರಾಘವೇಂದ್ರ
ಎಲ್ಲಿದ್ದರೇನು ನಾ ಹೇಗಿದ್ದರೇನು ನಾ, ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ ಬಾಳಿದರೆ ಸಾಕು, ರಾಘವೇಂದ್ರ
ಹಾಡಿನಲ್ಲಿ ಪಾಪದ, ತಪ್ಪುಗಳ, ಅತಯಾಸೆಯ ಬಿಟ್ಟು ಬಾಳುವ ಬದುಕ ಹಾಡಿಗೆ ಸಾಹಿತ್ಯವನ್ನು ಚಿ. ಉದಯಶಂಕರ್ಬರೆದಿದ್ದು, ಸಂಗೀತ: ಉಪೇಂದ್ರ ಕುಮಾರ್ ಅವರದಾಗಿತ್ತು. ರಾಜ್ ಕುಮಾರ್ ಮತ್ತು ಬಿ. ಆರ್ ಛಾಯಾ ಕಂಠದ ಈ ಹಾಡು ಈಗಲೂ ಜನಮಾನಸದಲ್ಲಿ ವಿಶೇಷವಾಗಿತ್ತು.

ಹಾಗೇ ಇನ್ನೊಂದು ಜಾನಪದ ಗೀತೆ ಇಲ್ಲಿ ಪ್ರಸ್ತುತ ಅನಿಸುತ್ತೆ, ಯಾಕಂದ್ರೆ ಸತ್ತಾಗ ಹೊತ್ಕೊಂಡೋಗೊಲ್ಲ ಅಂತ ಗೊತ್ತಿದ್ರೂದುರಾಸೆ, ಇದ್ರೂ ಜಿಪುಣತನ ಬೆಳೆಸಿಕೊಂಡು ಆಸ್ತಿ, ಹಣಕ್ಕಾಗಿ ಜಗಳವಾಡ್ತಾರೆ. ಅವರಿಗಾಗಿ ಈ ಹಾಡು ಸೂಕ್ತ ಅನಿಸುತ್ತೆ. ನಮ್ಮೆಲ್ಲರ ಅಂತಿಮ ಹೆಜ್ಜೆ ನೆನಪಾಗುತ್ತೆ.
ಯಾಕೆ ಬಡಿದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ನೆಚ್ಚಿ.
ನೀ ಹೋಗೊದರಿಯೇ ತಮ್ಮ ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ?
ಇದ್ರೆ ತಿಂಬೋ ತನಕ.
ಸತ್ತಾಗ ಬರುವರು ತಮ್ಮ ಗುಳಿ ತನಕ,
ಮಣ್ಣು ಮುಚ್ಚೋ ತನಕ ಮಣ್ಣು ಮುಚ್ಚೋ ತನಕ.
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ?
ಬದುಕೀ ಬೆಳೆಯೋ ತನಕ.
ಸತ್ತಾಗ ಬರುವರು ತಮ್ಮ ಗುಳಿ ತನಕ,
ಮಣ್ಣು ಮುಚ್ಚೋ ತನಕ.
ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ?
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ,
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ.
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ
ಒಟ್ಟಾರೆ ಸಮಾಜದಲ್ಲಿ ಇದ್ದದ್ದಕ್ಕೆ ತೃಪ್ತಿಪಡುವ ಜೊತೆಗೆ ಇದ್ದದ್ದರಲ್ಲಿ ಒಂದಷ್ಟುನ್ನು ದಾನ ಅಥವಾ ನೆರವಿನ ರೂಪದಲ್ಲಿ ನೀಡಿದರೆ ಭಗವಂತ ನಮಗೆ ಒಳ್ಳೆಯದನ್ನು ಮಾಡುತ್ತಾನೆ ಎಂಬ ನಂಬಿಕೆ ಬಹಳಷ್ಟು ಜನರಲ್ಲಿದೆ ಆದರೆ ಕೆಲವೇ ಕೆಲವರ ಇಂತಹ ಜಿಪುಣತನದ ವರ್ತನೆ ಬದಲಾಗಲು ಸಾಧ್ಯವೇ ಎಂಬ ಉತ್ತರವಿಲ್ಲದ ಪ್ರಶ್ನೆ ಕೇಳಬೇಕಾಗಿರುವುದು ದುರಂತವೇ ಹೌದು.