ಸೊರಬ : ಭಾರಿ ಮಳೆಗೆ ತಾಲ್ಲೂಕಿನ ವಿವಿಧ ಕಡೆ ಅವಾಂತರಗಳು ಉಂಟಾಗುತ್ತಿವೆ. ತಾಲ್ಲೂಕಿನ ದೇವತಿ ಕೊಪ್ಪ ಉರಗನಹಳ್ಳಿಯ ದೊಡ್ಡ ಕೆರೆ ಏರಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ

ಭಾರಿ ಮಳೆಗೆ ಕುಸಿದಿದ್ದು ಅಪಾರ ಪ್ರಮಾಣದ ಕೃಷಿ ಭೂಮಿಗೆ ನೀರು ನುಗ್ಗುವ ಸಾಧ್ಯತೆಯಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬೇಸಿಗೆಯ ಸಮಯದಲ್ಲಿ ಇಲ್ಲಿನ ಕೃಷಿ ಜಮೀನಿಗೆ ಈ ಕೆರೆಯು ಪ್ರಮುಖ ನೀರಾವರಿ ಮೂಲವಾಗಿದ್ದು ಪ್ರತಿ ವರ್ಷ ಕೆರೆ ಏರಿ ಕುಸಿಯುತ್ತಿರುವುದರಿಂದ ತಕ್ಷಣವೇ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸುವ ಕಡೆ ಕಾರ್ಯೋನ್ಮುಖವಾಗಬೇಕು.

ಈ ಹಿಂದಿನ ಶಾಸಕರ ಅವಧಿಯಲ್ಲಿ 46 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಕೇವಲ ದಾಖಲೆಗಳಲ್ಲಿ ಮಾತ್ರ ಕಾಮಗಾರಿಯಾಗಿದ್ದು ವಾಸ್ತವವಾಗಿ ಯಾವುದೇ ಉಪಯೋಗವಾಗಿಲ್ಲ ಎಂದು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂಜಯ್ ದೇವತಿಕೊಪ್ಪ ಆರೋಪಿಸಿದ್ದಾರೆ.
*ವರದಿ: ವಿಕಾಸ್ ಕ್ಯಾಸನೂರು*