ಶಿವಮೊಗ್ಗ : ಜ್ಞಾನಾರ್ಜನೆ ನಿರಂತರವಾದುದು. ಒಂದು ದೇಶದ ಅಭಿವೃದ್ಧಿ ನಿಂತಿರುವುದು ಅಲ್ಲಿನ ಜ್ಞಾನ ಸಾಮಾರ್ಥ್ಯದಿಂದ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ನಗರದ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದಿಂದ ಆಯೋಜಿಸಿದ “ಜಾಗತಿಕ ಸುಸ್ಥಿರ ಮತ್ತು ಸಮಾವೇಶಾತ್ಮಕ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ವೇದಿಕೆಗಳ ಶಕ್ತಿಯನ್ನು ಉಪಯೋಗಿಸುವುದು” ಎಂಬ ವಿಷಯ ಕುರಿತ ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದ ಎದುರು ಭಾರತ ಮುಂಚೂಣಿ ದೇಶವಾಗಿರಲು ಸಾಧ್ಯವಾಗಿದ್ದು ಇಲ್ಲಿನ ಜ್ಞಾನ ಕೌಶಲ್ಯಗಳಿಂದ ಜ್ಞಾನ ವಿಜ್ಞಾನ ಇಂದು ನಿರಂತರವಾಗಿ ಬೆಳೆಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಆಧುನಿಕ ತಂತ್ರಜ್ಞಾನದ ಅರಿವು ಸಾಧ್ಯವಾಗುತ್ತದೆ ಎಂದರು.

ವಿಚಾರ ಸಂಕಿರಣದ ದಿಕ್ಸೂಚಿ ಭಾಷಣವನ್ನು ಕುವೈತ್ ದೇಶದ ಮಸ್ಕತ್ನ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಅಪ್ಲೈಡ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಂತೋಷ ಕುಮಾರ್ ಮಾತನಾಡಿ ಕೃತಕ ಬುದ್ಧಿಮತ್ತೆಯು ಮನುಷ್ಯನ ಬುದ್ಧಿವಂತಿಕೆಯನ್ನು ಯಂತ್ರಗಳಿಗೆ ಕಲಿಸುವ ವಿಧಾನವಾಗಿದೆ. ಕೃತಕವಾಗಿ ನಿರ್ಧಾರಗಳನ್ನು, ಸಮಸ್ಯೆ ಪರಿಹಾರ, ಭಾಷೆಯನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವ ವಿಧಾನ ಇಲ್ಲಿದೆ. ಕೃಷಿ, ಆಟೋಮೊಬೈಲ್, ಪ್ರವಾಸೋದ್ಯಮ, ಬ್ಯಾಂಕಿಂಗ್, ಶಿಕ್ಷಣ ಕ್ಷೇತ್ರದಲ್ಲಿ ಇದನ್ನು ಸಮರ್ಥವಾಗಿ ಬಳಸಲಾಗುತ್ತದೆ. ನಮ್ಮ ಭಾವನೆಗಳನ್ನು ಕೃತಕ ಬುದ್ಧಿಮತ್ತೆಗೆ ಅಳವಡಿಸಿದರೆ ಅದು ಹೇಗೆ ಪ್ರತಿಕ್ರಿಯಿಸುತ್ತದೆ ಅನ್ನುವುದು ಯಕ್ಷಪ್ರಶ್ನೆಯಾಗಿದೆ. ಡ್ರೋಣ, ರೋಬೋಟ್ ಗಳನ್ನು ಕೃಷಿಯಲ್ಲಿ ಬಳಸುವುದರಿಂದ ಉತ್ಪಾದನೆ ಜಾಸ್ತಿ ಮಾಡಬಹುದು. ಭೂಮಿಯ ಆಳದಲ್ಲಿ ನೀರಿನ ಗುಣಮಟ್ಟ ಅಳೆಯಲು ಸಾಧ್ಯವಾಗುತ್ತದೆ ಎಂದರು.
ವಿಧಾನ ಪರಿಷತ್ ಶಾಸಕ ಡಿ.ಎಸ್ ಅರುಣ್ ಮಾತನಾಡಿ, ಇಂದು ವೇಗವಾಗಿ ಬೆಳೆಯುತ್ತಿರುವ ಡಿಜಿಲಿಕರಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಿದೆ ಎಂದರು.

ಡಾ. ಧನಂಜಯ ಸರ್ಜಿ ಮಾತನಾಡಿ, ಇಂದು ಜಗತ್ತು ವೇಗವಾಗಿ ಬೆಳೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆ ಬಳಸುವುದರಿಂದ ಅನಾವಶ್ಯಕವಾಗಿ ಬಳಕೆಯಾಗುತ್ತಿದ್ದ ಮಾನವನ ಶ್ರಮ ಕಡಿಮೆಯಾಗಿದೆ. ಸುಲಭವಾಗಿ ಜನರಿಗೆ ಸೌಲಭ್ಯಗಳನ್ನು ತಲುಪಿಸಲು ಸಾಧ್ಯವಾಗಿದೆ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ವೇದಿಕೆಯಲ್ಲಿ ಇರಾಕ್ ದೇಶದ ಟಿಸ್ಕ್ ಇಂಟರ್ ನ್ಯಾಶನಲ್ ಯೂನಿವರ್ಸಿಟಿಯ ಪ್ರಾಧ್ಯಾಪಕರಾದ ಡಾ. ಗೌಸಿಯ ಖಾಟೂನ್ ಮತ್ತು ಬೆಂಗಳೂರಿನ ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಮಹಮ್ಮದ್ ಫಾರೂಕ್ ಫಾಷ ವಿಚಾರ ಸಂಕಿರಣರದ ಆಶಯ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ಬಿ.ಜಿ ಚನ್ನಪ್ಪ ವಹಿಸಿದ್ದರು. ವೇದಿಕೆಯಲ್ಲಿ ಐ.ಕ್ಯು.ಎ.ಸಿ. ಸಂಚಾಲಕರಾದ ಡಾ. ವಿದ್ಯಾಮರಿಯ ಜೋಸೆಫ್ ಉಪಸ್ಥಿತಿ ಇದ್ದರು. ಡಾ. ಪ್ರಸನ್ನ ಎಸ್. ಎಚ್ ವಂದಿಸಿ, ಡಾ. ಅಶ್ವಿನಿ ನಿರೂಪಿಸಿ, ಕುಮಾರಿ ಶುಭಾಂಕ ಪ್ರಾರ್ಥಿಸಿದರು. ದೇಶ ವಿದೇಶದಿಂದ ಸುಮಾರು ೧೭೦ ಕಾಲೇಜಿನಿಂದ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.