ಶಿವಮೊಗ್ಗ: ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯ ನೌಕರರ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಷ್ಟ್ರಭಕ್ತರ ಬಳಗದ ಸಂಪೂರ್ಣ ಬೆಂಬಲವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಪಾಲಿಕೆ ಆವರಣದಲ್ಲಿ ನೌಕರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರಿಂದ ಅಹವಾಲು ಸ್ವೀಕರಿಸಿ ಸರ್ಕಾರದ ಬೇಜವಾಬ್ದಾರಿ ದುರ್ವರ್ತನೆಯನ್ನು ಖಂಡಿಸಿದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ದೆಹಲಿಗೆ ಹೋಗಿ ಕುಳಿತಿದ್ದಾರೆ. ಒಂದು ವಾರದ ಮೊದಲೇ 10 ಪಾಲಿಕೆಗಳ ನೌಕರರು ಸರ್ಕಾರದ ಗಮನಕ್ಕೆ ತಂದು ಅನಿರ್ಧಿಷ್ಟಾವಧಿ ಮುಷ್ಕರದ ಮಾಹಿತಿ ನೀಡಿದ್ದರೂ ಸರ್ಕಾರ, ಮಂತ್ರಿಗಳು ಯಾರೂ ಇದುವರೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹಿರಿಯ ಅಧಿಕಾರಿಗಳು ಕ್ಯಾರೇ ಅನ್ನಲಿಲ್ಲ. ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ದೂರಿದರು.

ಸ್ವಚ್ಛತೆ ಇಲ್ಲದೇ ನಗರದ ಸ್ಥಿತಿ ಹದಗೆಟ್ಟಿದೆ. ರೋಗ ರುಜಿನಗಳು ಹರಡುತ್ತಿದೆ. ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಇನ್ನೆರಡು ದಿನಗಳು ಕಳೆದರೆ ನಗರದ ಸ್ಥಿತಿ ಹೀನಾಯ ಸ್ಥಿತಿಗೆ ತಲುಪಲಿದೆ. ಪೌರ ಕಾರ್ಮಿಕರ ನ್ಯಾಯಯುತ ಭೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ನಾನು ನಿಮ್ಮೊಂದಿಗೆ ಇದ್ದೇನೆ. ನೀವು ಮುಂದಿನ ಹೋರಾಟ ಬೆಂಗಳೂರಲ್ಲಿ ಮಾಡುವುದಾದರೂ ಸಹ ನಾನು ನಿಮ್ಮ ಜೊತೆಗೆ ಇರುತ್ತೇನೆ. ಈಗಾಗಲೇ ಸರ್ಕಾರದ ಹಾಗೂ ಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ದೂರವಾಣಿಯಲ್ಲೂ ಮಾತನಾಡಿದ್ದೇನೆ ಎಂದರು.

ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ರಾಜ್ಯದ ಜನ ಸಿಎಂ, ಡಿಸಿಎಂ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಮತ್ತು ಸರ್ಕಾರಕ್ಕೆ ಛೀಮಾರಿ ಹಾಕಲಿದ್ದಾರೆ. ಎಳ್ಳಷ್ಟೂ ಮಾನ ಮರ್ಯಾದೆ ಇದ್ದರೆ ಪೌರ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲವಾದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ. ಕಾಂತೇಶ್, ಜಾಧವ್, ಇ. ವಿಶ್ವಾಸ್, ಶಿವಾಜಿ, ಶ್ರೀಕಾಂತ್, ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದ, ನಿರ್ದೇಶಕರಾದ ಕುಮಾರ್,S G ಮಂಜುನಾಥ್ ಮೊದಲಾದವರಿದ್ದರು.