ಶಿವಮೊಗ್ಗ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಉತ್ತಮ ಮತ್ತು ಕ್ರೀಯಾಶೀಲ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಶಿವಮೊಗ್ಗ ನಗರ ಜೆಡಿಎಸ್ ಘಟಕದ ವತಿಯಿಂದ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದು, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಜೆಡಿಎಸ್ ಕಛೇರಿ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಅಮೀರ್ ಅಹ್ಮದ್ ವೃತ್ತ, ಸೀನಪ್ಪಶೆಟ್ಟಿ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ನಡೆಯಿತು.

ಎಲ್ಲಾ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರ ಹೆಚ್ಚುತ್ತಿದ್ದು, ಸ್ವಜನಪಕ್ಷಪಾತ ತುಂಬಿತುಳುಕುತ್ತಿದೆ. ಪಕ್ಷದ ಹಿರಿಯ ಶಾಸಕರು ಹಾಗೂ ಮುಖಂಡರು, ರಾಜ್ಯ ಸರ್ಕಾರದ ಮತ್ತು ಸಚಿವರುಗಳ ವಿರುದ್ಧ ಬಹಿರಂಗವಾಗಿ ಸಾಕ್ಷಿಸಮೇತ ದಾಖಲೆಗಳೊಂದಿಗೆ ಆರೋಪಿಸಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ವಸತಿ ಇಲಾಖೆಯು ರಾಜ್ಯದಲ್ಲಿನ ಅತ್ಯಂತ ಹಿಂದುಳಿದ, ಬಡತನದ ಕುಟುಂಬಗಳ ನಿವೇಶನ ಹಾಗೂ ವಸತಿರಹಿತ ನೈಜ ಫಲಾನುಭವಿಗಳಿಗೆ ಮೀಸಲಾಗಿರುವ ವಸತಿ ಯೋಜನೆಗಳನ್ನು ಲಂಚ ನೀಡಿದವರಿಗೆ ಮಾತ್ರ ನೀಡುತ್ತಿದ್ದು, ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯ ಸರ್ಕಾರ ಮೂಲಭೂತ ಸೌಲಭ್ಯಗಳಾದ ರಸ್ತೆ, ಸೇತುವೆ, ಕೆರೆ-ಕಟ್ಟೆಗಳ ಪುನಶ್ಚೇತನ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವಲ್ಲಿ ಸಂಪೂರ್ಣವಿಫಲವಾಗಿದೆ. ಹಾಗೆಯೇ ಗುತ್ತಿಗೆದಾರರ ಬಾಕಿಹಣ ಪಾವತಿ ಮಾಡುವಲ್ಲಿಯೂ ಸಹ ವಿಳಂಬ ಮಾಡುತ್ತಿದೆ ಎಂದು ದೂರಿದರು.

ಬಡವರ ಹಾಗೂ ರೈತವಿರೋಧಿ ಸರ್ಕಾರವಾಗಿದ್ದು, ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ ಹಣದಲ್ಲಿಯೂ ಸಹ ತಾರತಮ್ಯ ಎಸಗುತ್ತಿದೆ. ಈ ವರ್ಗದ ಜನರಿಗೆ ಅನ್ಯಾಯ ಮಾಡುತ್ತಾ, ಕೇವಲ ತುಷ್ಠೀಕರಣದ ರಾಜ್ಯಕಾರಣ ಮಾಡುತ್ತಾ, ರಾಜ್ಯದ ಜನರಿಗೆ ಘೋರ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರೂ. ಹಗರಣವಾಗಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದ್ದು, ವಸತಿ ಸಚಿವ ಜಮೀರ್ ಅಹ್ಮದ್ಖಾನ್ ಅವರನ್ನು ಸರ್ಕಾರ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಆರ್ಸಿಬಿ ಕ್ರಿಕೇಟ್ ತಂಡದ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗಲಭೆ ಮತ್ತು ಕಾಲ್ತುಳಿತದಲ್ಲಿ ಅಮಾಯಕರನ್ನು ಬಲಿ ತೆಗೆದುಕೊಂಡಿರುವುದು ನೇರವಾಗಿ ಸರ್ಕಾರದ ಆತುರದ ನಿರ್ಧಾರ ಮತ್ತು ಭದ್ರತೆಯ ವೈಫಲ್ಯತೆಯೇ ನೆರ ಕಾರಣವಾಗಿದೆ ಎಂದು ದೂರಿದರು.
ಭ್ರಷ್ಟಾಚಾರ ಆಡಳಿತ ವೈಫಲ್ಯದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ವಿಫಲವಾಗಿರುವುದರಿಂದ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಮಾಜಿ ಪಾಲಿಕೆ ಸದಸ್ಯ ರಘು ಬಾಲರಾಜ್ ಪ್ರಮುಖರಾದ ಹೆಚ್.ಎಂ. ಸಂಗಯ್ಯ, ಅಬ್ದುಲ್ ವಾಜೀದ್, ತ್ಯಾಗರಾಜ್, ದಾದಾಪೀರ್, ಮಧುಕುಮಾರ್, ಕಾಂತ್ರಾಜ್, ನರಸಿಂಹ ಗಂಧದಮನೆ, ಮಹೇಶ್, ರಮೇಶ್ ನಾಯ್ಕ, ಬೊಮ್ಮನಕಟ್ಟೆ ಮಂಜುನಾಥ್, ರಾಕೇಶ್ ಡಿಸೋಜಾ, ಗೋಪಿ ಮೊದಲಿಯಾರ್, ದಯಾನಂದ್, ನಿಖಲ್, ಅಲ್ತಾಫ್, ಭವಾನಿ ನರಸಿಂಹ, ಪುಷ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.