ಶಿವಮೊಗ್ಗ : ಜಿಲ್ಲೆಯ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಸಿಗಂದೂರು ಕ್ಷೇತ್ರದ ಶ್ರೀ ಚೌಡೇಶ್ವರಿ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಐತಿಹಾಸಿಕವಾಗಿ ನಿರ್ಮಾಣಗೊಂಡ ಅತ್ಯಂತ ವಿಭಿನ್ನವಾದ ಸೇತುವೆ ಉದ್ಘಾಟನಾ ಸಮಾರಂಭ ಜುಲೈ ೧೪ರ ಸೋಮವಾರ ನಡೆಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅಂದು ಈ ವಿನೂತನವಾದ ಸೇತುವೆಯನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದು, ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಕಲ ತಯಾರಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಮೊದಲು ಕೇವಲ ಲಾಂಚ್ನಲ್ಲಿ ಸಿಗಂದೂರೇಶ್ವರಿ ದೇವಿಯನ್ನು ದರ್ಶನ ಮಾಡುವ ಅವಕಾಶ ನಮ್ಮದಾಗಿತ್ತು. ಈ ಬಗ್ಗೆ ಅನೇಕ ಹಿರಿಯರು ಈ ಸೇತುವೆ ನಿರ್ಮಾಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಕಾರಣಾಂತರಗಳಿಂದ ಅದು ಈಡೇರಿರಲಿಲ್ಲ ೨೦೧೮ರಲ್ಲಿ ನಿತಿನ್ ಗಡ್ಕರಿಯವರು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಕ್ಕೆ ಪ್ರಧಾನಿ ಮೋದಿಯವರೇ ಮುಖ್ಯ ಕಾರಣಕರ್ತರು ಎಂದರು.
ಹಿನ್ನೀರಿನ ಭಾಗದ ಜನತೆಯ ಬಹುದಿನದ ಬೇಡಿಕೆ ಈಡೇರುತ್ತಿದ್ದು, ಇದರೊಂದಿಗೆ ಕೊಲ್ಲೂರು ಭಾಗದ ಪ್ರವಾಸಿ ಸ್ಥಳಗಳಿಗೆ ಕಡಿಮೆ ಅಂತರದಲ್ಲಿ ಪ್ರವಾಸಿಗರು ಹೋಗಬಹುದಾಗಿದೆ . ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಆದಷ್ಟು ಬೇಗನೆ ಸಾರ್ವಜನಿಕರಿಗೆ ಇದರ ಸದುಪಯೋಗ ದೊರಕಬೇಕೆಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

ಸೇತುವೆಯನ್ನು ೪೭೩ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ದೇಶದಲ್ಲಿಯೇ ೨ನೇ ದೊಡ್ಡದಾದ ಕೇಬಲ್ ಸೇತುವೆ ಇದಾಗಿದೆ ಎಂದ ಅವರು, ಇದು ಶಿವಮೊಗ್ಗ ಜಿಲ್ಲೆಯ ಪಾಲಿಗೆ ಕೇಂದ್ರ ಸರ್ಕಾರ ನೀಡಿದ ವಿಶೇಷ ವರದಾನ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ|| ಧನಂಜಯ ಸರ್ಜಿ, ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಕೆ.ಜಿ.ಕುಮಾರಸ್ವಾಮಿ, ಆರ್.ಕೆ.ಸಿದ್ದರಾಮಣ್ಣ, ಜಗದೀಶ್ ಇನ್ನಿತರರಿದ್ದರು.