ಸಾಗರ : ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಶೀಘ್ರವಾಗಿ ಸಾರ್ವಜನಿಕ ಸಂಚಾರಕ್ಕೆ ಸಿಗಬೇಕು. ಬಿಜೆಪಿಯವರು ನಿತಿನ್ ಗಡ್ಕರಿಯವರನ್ನೋ, ಪ್ರಧಾನಿ ನರೇಂದ್ರ ಮೋದಿಯವರನ್ನೋ ಅಥವಾ ಮೋದಿ ಫ್ರೆಂಡ್ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪನ್ನು ಬೇಕಾದರೂ ಕರೆಸಲಿ. ಎರಡೂ ಸೇತುವೆ ಶೀಘ್ರ ಜನೋಪಯೋಗಕ್ಕೆ ಸಂದಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.

ತಾಲ್ಲೂಕಿನ ಶರಾವತಿ ಹಿನ್ನೀರಿನ ಹಸಿರುಮಕ್ಕಿ ಮತ್ತು ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಕಾಮಗಾರಿಯನ್ನು ಶುಕ್ರವಾರ ವೀಕ್ಷಣೆ ಮಾಡಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸೇತುವೆ ಕಾಮಗಾರಿ ಮುಗಿದ ತಕ್ಷಣ ಸಂಚಾರಕ್ಕೆ ಬಿಡದೆ ಹೋದಲ್ಲಿ ನಾವೇ ಜನವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾದ ಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂದು ಹೇಳಿದರು.

ಸೇತುವೆ ನಿರ್ಮಾಣದ ಹಿಂದೆ ಅನೇಕ ಜನರ ಹೋರಾಟ ಇದೆ. ಪ್ರಸನ್ನ ಕೆರೆಕೈನಂತಹ ಪ್ರಮುಖರು ಸೇತುವೆಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಹೋರಾಟ ಮಾಡಿದವರನೆಲ್ಲಾ ಹಿಂದೆ ತಳ್ಳಿ ಅಣ್ಣತಮ್ಮ ತಮ್ಮದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಒಂದು ಕೆಟ್ಟಚಾಳಿ ಇದೆ. ನೀವೆ ಮನೆ ಕಟ್ಟಿಕೊಳ್ಳಿ. ಅಣ್ಣತಮ್ಮ ಬಂದು ನಿಂತು ಫೋಟೋ ಹೊಡೆಸಿಕೊಂಡು ನಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಾರೆ. ತುಮರಿ ಸೇತುವೆಗೆ ಹಣ ತಂದಿದ್ದೇವೆ ಎಂದು ಹೇಳುತ್ತಿದ್ದಾರೆ, ಆದರೆ ಅದು ರಾಜ್ಯದ ಜನರು ಕೇಂದ್ರಕ್ಕೆ ತೆರಿಗೆ ನೀಡಿದ ಹಣ ಎನ್ನುವುದನ್ನು ಮರೆಯಬಾರದು. ಸೇತುವೆಗೆ ಹಣ ತಂದಿದ್ದು ನೀವಾದರೂ ಜಾಗ ರಾಜ್ಯ ಸರ್ಕಾರದ್ದು ಎನ್ನುವುದನ್ನು ಮರೆಯಬಾರದು ಎಂದರು.

ಹಸಿರುಮಕ್ಕಿ ಸೇತುವೆ ಕಾಮಗಾರಿಗೆ ಹಿಂದಿನ ಬಿಜೆಪಿ ಸರ್ಕಾರ ಪೂರ್ಣ ಸಹಮತ ನೀಡಿಲ್ಲ. ಹಸಿರುಮಕ್ಕಿ ಸೇತುವೆ ಕಾಗೋಡು ತಿಮ್ಮಪ್ಪ ಅವರ ಕನಸು. ೧೨೫ ಕೋಟಿ ರೂ. ರಾಜ್ಯ ಸರ್ಕಾರದ ಅನುದಾನದಿಂದ ಸೇತುವೆ ನಿರ್ಮಾಣವಾಗುತ್ತಿದೆ. ಹಿಂದಿನ ಸರ್ಕಾರ ೩೨ ಕೋಟಿ ರೂ. ಮಂಜೂರು ಮಾಡಿದ್ದನ್ನು ಬಿಟ್ಟರೆ ಕಾಮಗಾರಿ ಪ್ರಗತಿ ಬಗ್ಗೆ ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಶಾಸಕ ಗೋಪಾಲಕೃಷ್ಣ ಬೇಳೂರು ೪೫ ಕೋಟಿ ರೂ. ಹಣ ಮಂಜೂರು ಮಾಡಿಸಿದ್ದು ಇನ್ನು ೧೬ ಸ್ಪ್ಯಾನ್ ಕೆಲಸ ಮುಗಿದರೆ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುತ್ತದೆ. ಒಟ್ಟಾರೆ ಎರಡೂ ಸೇತುವೆ ಸಂಚಾರಕ್ಕೆ ಮುಕ್ತವಾದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.
ಶರಾವತಿ ಸಂತ್ರಸ್ತರ ಸಮಸ್ಯೆ ಹಾಗೆ ಉಳಿಯಲು ಬಿಜೆಪಿಯವರು ನೇರ ಕಾರಣ. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ ಸಮಸ್ಯೆಗೊಂದು ತಾರ್ಕಿಕ ಅಂತ್ಯ ಕಲ್ಪಿಸುವ ಪ್ರಯತ್ನ ನಡೆಸಿದ್ದರು. ಇದೀಗ ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ದತೆಯಿಂದ ಕೆಲಸ ಮಾಡುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿ ಸಹ ಸಮರ್ಥ ವಾದ ಮಂಡಿಸಲು ತಜ್ಞರನ್ನು ನೇಮಿಸಲಾಗಿದೆ. ಸಂತ್ರಸ್ತರಿಗೆ ನ್ಯಾಯ ಕೊಡಿಸಿಯೆ ತೀರುತ್ತೇವೆ ಎಂದು ಭರವಸೆ ನೀಡಿದರು.

ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಹಸಿರುಮಕ್ಕಿ ಸೇತುವೆ ವಿಳಂಬಕ್ಕೆ ಹರತಾಳು ಹಾಲಪ್ಪ ಕಾರಣ. ತುಮರಿ ಸೇತುವೆ ಮುಗಿಸಿ, ಕೇಂದ್ರ ಸರ್ಕಾರಕ್ಕೆ ಹೆಸರು ತಂದು ಕೊಡಬೇಕು ಎಂದು ಹಿಂದಿನ ಶಾಸಕ ಹರತಾಳು ಹಾಲಪ್ಪ, ಸಂಸದ ಬಿ.ವೈ.ರಾಘವೇಂದ್ರ ಹಸಿರುಮಕ್ಕಿ ಸೇತುವೆಗೆ ಹಣ ಬಿಡುಗಡೆ ಮಾಡಿಸಿಲ್ಲ. ನಾನು ಶಾಸಕನಾದ ಮೇಲೆ ಹಸಿರುಮಕ್ಕಿ ಸೇತುವೆಗೆ ೪೫ ಕೋಟಿ ಮಂಜೂರು ಮಾಡಿಸಿದ್ದೇನೆ. ಇನ್ನು ಕೆಲವು ತಿಂಗಳಿನಲ್ಲಿ ಹಸಿರುಮಕ್ಕಿ ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂದ ಅವರು, ತುಮರಿ ಸೇತುವೆ ಶೀಘ್ರ ಲೋಕಾರ್ಪಣೆಯಾಗಬೇಕು. ತುಮರಿ ಸೇತುವೆ ಯಾರ ಮನೆ ದುಡ್ಡಿನಿಂದ ಕೇಂದ್ರ ಸರ್ಕಾರದ ಹಣ. ರಾಜ್ಯ ಸರ್ಕಾರದ ತೆರಿಗೆ ಹಣ ಕೇಂದ್ರ ಕೊಟ್ಟಿದೆ. ಯಡಿಯೂರಪ್ಪ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ಮಾಡಿದ್ದರು. ಆದರೆ ರಾಘವೇಂದ್ರ ವಿಜಯೇಂದ್ರ ಯಡಿಯೂರಪ್ಪ ಅವರ ಹೆಸರನ್ನೆ ಸೈಡ್ವಿಂಗ್ ಮಾಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸಿಗಂದೂರು ತಂಟೆಗೆ ಬಂದರೆ ಹುಷಾರ್ : ಬಿಜೆಪಿ ಸಿಗಂದೂರು ದೇವಸ್ಥಾನದ ತಂಟೆಗೆ ಬಂದರೆ ಹುಷಾರ್ ಎಂದು ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ. ಈ ಭಾಗದಲ್ಲಿ ಹಿಂದುಳಿದ ವರ್ಗದ ಶ್ರದ್ಧಾಕೇಂದ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನವಾಗಿದೆ. ಅದನ್ನು ವಶಕ್ಕೆ ಪಡೆಯುವುದು, ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಿದರೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪ್ರಮುಖರಾದ ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಕಲಸೆ ಚಂದ್ರಪ್ಪ, ಸೋಮಶೇಖರ ಲ್ಯಾವಿಗೆರೆ, ಅನಿತಾಕುಮಾರಿ, ಗಣಪತಿ ಮಂಡಗಳಲೆ, ಮಧುಮಾಲತಿ, ಎಲ್.ಚಂದ್ರಪ್ಪ, ವಿಲ್ಸನ್, ಲೋಕೇಶ್ ಗಾಳಿಪುರ ಇನ್ನಿತರರು ಹಾಜರಿದ್ದರು. (