ಶಿವಮೊಗ್ಗ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜು.೬ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಪತ್ರಕರ್ತರು, ಅವರ ಕುಟುಂಬ ವರ್ಗದವರು ಹಾಗೂ ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಶಿಬಿರದಲ್ಲಿ ರಕ್ತದೊತ್ತಡ (ಬಿಪಿ), ಇಸಿಜಿ, ಇಕೋ, ಪಲ್ಸ್, ಸ್ಯಾಚ್ಯುರೇಷನ್, ಸಿಬಿಸಿ, ಆರ್ಬಿಎಸ್, ಮೂತ್ರಪಿಂಡ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ತಜ್ಞ ವೈದ್ಯರು ನಡೆಸಲಿದ್ದು, ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆಗಳ ಕುರಿತಾಗಿಯೂ ತಪಾಸಣೆ ನಡೆಸಲಿದ್ದಾರೆ ಎಂದರು.

ನಗರದ ಪ್ರತಿಷ್ಟಿತ ಮೆಟ್ರೋ ಆಸ್ಪತ್ರೆ, ಮಾತೃ ವಾತ್ಸಲ್ಯ ಆಸ್ಪತ್ರೆ, ಹೃದಯ ಸ್ಪೆಷಾಲಿಟಿ ಕ್ಲೀನಿಕ್, ಕ್ರಿಷ ಕಿಡ್ನಿ ಕೇರ್ ಸೆಂಟರ್ ಕೈಜೋಡಿಸಿದ್ದು, ತಜ್ಞ ವೈದ್ಯರುಗಳಾದ ಡಾ. ಪೃಥ್ವಿ, ಡಾ. ದಯಾನಂದ್, ಡಾ. ನಾಗಮಣಿಯವರು ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ ೧೦ ಗಂಟೆಗೆ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಶಿಬಿರವನ್ನು ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ಬಾನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಮೋಹನ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.

ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ. ಶಿವಕುಮಾರ್ ವಹಿಸಲಿದ್ದಾರೆ. ರಾಜ್ಯ ಸಮಿತಿ ನಿರ್ದೆಶಕ ಎನ್. ರವಿಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಉಪಸ್ಥಿತರಿರಲಿದ್ದಾರೆ.
ಡಾ|| ಪೃಥ್ವಿ ಮಾತನಾಡಿ, ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ. ತಮ್ಮ ಆರೋಗ್ಯವನ್ನು ತಾವೇ ಮರೆತು ಬಿಡುತ್ತಾರೆ. ಪ್ರತಿವರ್ಷವೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ಆಸ್ಪತ್ರೆ ಕೂಡ ನೆರವಿಗೆ ಬಂದಿದ್ದು, ಈ ಆರೋಗ್ಯ ಶಿಬಿರದಲ್ಲಿ ಎತ್ತರ, ತೂಕ, ಪಲ್ಸ್, ಮಧುಮೇಹ, ಕಿಡ್ನಿಗೆ ಸಂಬಂಧಿಸಿದಂತೆ ಹಾಗೂ ಹಿಮೋಗ್ಲೋಬಿನ್ ಹೀಗೆ ಅನೇಕ ತಪಾಸಣೆಗಳನ್ನು ಮಾಡಲಾಗುವುದು. ಜೊತೆಗೆ ವೈದ್ಯರ ಸಲಹೆ ನೀಡಲಾಗುವುದು ಎಂದರು.
ಡಾ|| ನಾಗವೇಣಿ ಮಾತನಾಡಿ, ಪತ್ರಕರ್ತೆಯರು ಹಾಗೂ ಅವರ ಕುಟುಂಬದ ಮಹಿಳೆಯರಿಗೆ ವಿಶೇಷವಾಗಿ ಮುಟ್ಟಿನ ತೊಂದರೆಗಳ ಬಗ್ಗೆ ಗರ್ಭಕೋಶ ಹಾಗೂ ಸ್ತನಕ್ಯಾನ್ಸರ್ ಪರೀಕ್ಷೆ, ಬಿಳಿಸೆರಗು ಮುಂತಾದ ಮಹಿಳೆಯರಿಗೆ ಸಂಬಂಧಿಸಿದ ವಿಶೇಷ ಖಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಾಗುವುದು. ಪತ್ರಕರ್ತರು ಇದರ ಪ್ರಯೋಜನ ಪಡೆಯಬೇಕು ಎಂದರು.

ಡಾ|| ದಯಾನಂದ ಮಾತನಾಡಿ, ನಮ್ಮ ದೇಹದಲ್ಲಿ ಕಿಡ್ನಿಕೂಡ ಬಹುಮುಖ್ಯವಾದ ಅಂಗವಾಗಿದೆ. ಇದರ ರಕ್ಷಣೆಕೂಡ ಬಹಳ ಮುಖ್ಯ ಹಾಗಾಗಿ ಮಧುಮೇಹ ಇರುವವರು ಮತ್ತು ಇಲ್ಲದವರು ಕೂಡ ಕಿಡ್ನಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಜೊತೆಗೆ ಹೃದಯಕ್ಕೆ ಸಂಬಂಧಪಟ್ಟಂತೆ ತಪಾಸಣಾ ಮಾಡಿಸಿಕೊಳ್ಳುವುದು ಉತ್ತಮ. ಪತ್ರಕರ್ತರು ಆರೋಗ್ಯವಂತರಾಗಿದ್ದರೆ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯ. ಅವರ ಒತ್ತಡದಲ್ಲಿ ಇರುತ್ತಾರೆ. ಆರೋಗ್ಯವನ್ನು ಮರೆತುಬಿಡುತ್ತಾರೆ ಎಂದರು.
ಜಿಲ್ಲೆಯ ಪತ್ರಕರ್ತರು, ಅವರ ಕುಟುಂಬ ವರ್ಗದವರು ಹಾಗೂ ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಶಿಬಿರದ ಪ್ರಯೋಜನ ಪಡೆಯುವಂತೆ ಕೋರಿದರು.
ಪತ್ರಕರ್ತರು ಹಾಗೂ ಕುಟುಂಬದವರು, ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ತಪಾಸಣೆಗೆ ಬರುವಾಗ, ತಮ್ಮ ಆಧಾರ್ ಕಾರ್ಡ್, ಸಂಘದ ಸದಸ್ಯತ್ವ ಕಾರ್ಡ್ಗಳನ್ನು ಕಡ್ಡಾಯವಾಗಿ ತರುವಂತೆ ಸೂಚಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ಉಪಾಧ್ಯಕ್ಷ ಉಚ್ರಾಯಪ್ಪ ಇದ್ದರು.