ಶಿವಮೊಗ್ಗ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸತತ ವೈಫಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸಲು ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ಜುಲೈ ೫ರ ನಾಳೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯ ಸರ್ಕಾರ ಮಿತಿಮೀರಿದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಎಲ್ಲಾ ಇಲಾಖೆಯಲ್ಲೂ ತಾಂಡವವಾಡುತ್ತಿರುವ ಲಂಚಗುಳಿತನ, ಸ್ವಪಕ್ಷೀಯ ಶಾಸಕರಿಂದಲೇ ವಸತಿ ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ, ಆರ್ಥಿಕ ದಿವಾಳಿತನದಿಂದಾಗಿ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದೆ ಎಂದು ಆರೋಪಿಸಿ ಈ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಜೆಡಿಎಸ್ ಕಾರ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟು ನೆಹರೂ ರಸ್ತೆ, ಅಮೀರ್ ಅಹ್ಮದ್ ವೃತ್ತ, ಸೀನಪ್ಪಶೆಟ್ಟಿ ವೃತ್ತ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ತಲುಪಿ ಮನವಿ ಸಲ್ಲಿಸಲಾಗುವುದು.

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಶಾರದಾ ಪೂರ್ಯಾನಾಯ್ಕ್, ಮಾಜಿ ಶಾಸಕ ಕೆ.ಎಬಿ. ಪ್ರಸನ್ನಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ಸಿಂಗ್ ತಿಳಿಸಿದ್ದಾರೆ.