ಶಂಕರಘಟ್ಟ, ಜು. 02: ಭಾರತೀಯ ಸಮಾಜ ಯಾವುದೋ ಒಂದು ಕಂಬದ ಮೇಲೆ ನಿಂತ ಸರ್ಕಸ್ ಅಲ್ಲ. ಸಾವಿರ ಕಂಬಗಳ ಮೇಲೆ ನಿಂತ ಚಪ್ಪರ. ಹೀಗಾಗಿ, ಸಮಾಜದ ವಿವಿಧ ಸಂಸ್ಕೃತಿಗಳ ಆಚರಣೆಯೇ ಭಾರತದ ವಿಶಿಷ್ಠತೆ ಎಂದು ಖ್ಯಾತ ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಸಿನಿಮಾ, ನಾಟಕ, ಸಾಹಿತ್ಯ ಎಲ್ಲವೂ ಈ ವಿಶಿಷ್ಠ ಸಂಸ್ಕೃತಿಗಳ ಪ್ರತಿಬಿಂಬ. ಅದು ಜನಪ್ರಿಯ ಚಲನಚಿತ್ರಗಳಿರಬಹುದು, ಗಾಢವಾದ ಹೊಳಹುಗಳಿರುವ ಗಂಭೀರವಾದ ಸಾಹಿತ್ಯ ಇರಬಹುದು ಅಥವಾ ಹವ್ಯಾಸಿ ಯಕ್ಷಗಾನ ಇರಬಹುದು, ಎಲ್ಲವೂ ಜನಜೀವನದ ಕಲಾತ್ಮಕ ಅಭಿವ್ಯಕ್ತಿಯೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಲೆ ನಮ್ಮನ್ನು ಮನುಷ್ಯರನ್ನಾಗಿ ರೂಪಿಸುವಲ್ಲಿ ನೆರವಾಗಲಿ.

ಸಮಕಾಲೀನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಮೂಲಕ ಮುಕ್ತಿ ಮಾರ್ಗದ ಕಾಣ್ಕೆ ಅನಾವರಣಗೊಳಿಸುವುದೇ ಶಿಕ್ಷಣದ ನಿಜಧರ್ಮ ಎಂದರು.
ವಿಕಾಸಪಥವು ಹಾವು ಏಣಿ ಆಟ ಇದ್ದ ಹಾಗೆ. ಇಲ್ಲಿ ಅಸಮಾನತೆ, ಅಸಹನೆ, ಅಸಹಿಷ್ಣುತೆಗಳೆಂಬ ಹಾವುಗಳಿವೆ. ಅದರ ಜೊತೆಗೆ ಸಮಾನತೆ, ಸಹಿಷ್ಣುತೆಗಳೆಂಬ ಏಣಿಗಳೂ ಇವೆ. ಶಿಕ್ಷಣದ ಮೂಲಕ ಇಂಥಹಾ ಏಣಿಗಳನ್ನು ಕಂಡುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಠಕರ ಸಮಕಾಲೀನ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ನಿಷ್ಕಲ್ಮಷವಾದ ಮಮತೆ ಮತ್ತು ಸಮತೆ ಯುವಜನಾಂಗಕ್ಕೆ ದಾರಿದೀಪವಾಗಲಿ ಎಂದು ಆಶಿಸಿದರು.

ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿಶ್ವವಿದ್ಯಾಲಯವನ್ನು ಈ ಉನ್ನತ ಮಟ್ಟಕ್ಕೆ ಕಟ್ಟಿ ಬೆಳೆಸುವಲ್ಲಿ ಹಲವು ಮಹನೀಯರು ಕಾರಣಕರ್ತರಾಗಿದ್ದಾರೆ. ಆದರೆ ವಿವಿಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಗುರುತರ ಸವಾಲು ನಮ್ಮ ಮುಂದಿದೆ. ಸರ್ಕಾರದ ಅನುದಾನದ ಕೊರತೆ, ನೇಮಕಾತಿಯಲ್ಲಿ ಹಿನ್ನೆಡೆ, ಆಂತರಿಕ ಸಂಪನ್ಮೂಲಗಳ ಕ್ರೋಢೀರಣದಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದರು.
ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಸಿಂಡಿಕೇಟ್ ಸದಸ್ಯರುಗಳು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಅಧ್ಯಾಪಕರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.