ಶಿವಮೊಗ್ಗ : ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿವತಿಯಿಂದ ಸುವರ್ಣ ಮುಹೋತ್ಸವದ ಅಂಗವಾಗಿ ಜೂ.೨೬ರಂದು ಬೆಳಿಗ್ಗೆ ೧೧.೩೦ಕ್ಕೆ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ರವರ ೧೩೪ನೇ ಜನ್ಮದಿನ ಹಾಗೂ ದಲಿತ ಚಳುವಳಿಯ ಪಿತಾಮಹ ಪ್ರೊ.ಬಿ.ಕೃಷ್ಣಪ್ಪನವರ ೮೭ನೇ ಜನ್ಮದಿನ ಆಚರಣೆಯ ಜೊತೆಗೆ ಸಂವಿಧಾನ ಸಂರಕ್ಷಣಾ ಸಂಕಲ್ಪ ಸಮಾವೇಶ ಆಯೋಜಿಸಲಾಗಿದೆ ಎಂದು ಜಿಲ್ಲಾ ಸಂಚಾಲಕ ಚಿನ್ನಯ್ಯ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದ ಉದ್ಘಾಟನೆಯನ್ನು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ ನೆರವೇರಿಸುವರು. ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಓ ಹೇಮಂತ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಖಜಾಂಚಿ ಸತ್ಯ, ನಿವೃತ್ತ ಉಪನ್ಯಾಸಕ ಪ್ರೊ.ಚಂದ್ರಶೇಖರಯ್ಯ ಉಪಸ್ಥಿತರಿರುವರು. ಮುಖ್ಯ ಭಾಷಣಕಾರರಾಗಿ ಚಿತ್ರದುರ್ಗದ ದಲಿತ ಲೇಖಕ ಸಿ.ಕೆ. ಮಹೇಶ್ ಭಾಗವಹಿಸುವರು ಎಂದರು.

ದಲಿತ ಸಂಘರ್ಷ ಸಮಿತಿಯು ಸಾಮಾಜಿಕ ಆಧಾರಿತ ದಮನೀತರ ಧ್ವನಿಯಾಗಿದೆ. ಶೋಷಿತರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ನೊಂದವರ ಧ್ವನಿಯಾಗಿ ಕಳೆದ ೫೦ ವರ್ಷಗಳಿಂದ ನ್ಯಾಯಕ್ಕಾಗಿ ಅಸ್ಪೃಶ್ಯತೆಯ ವಿರುದ್ಧ ನಮ್ಮ ಸಂಘಟನೆ ಧ್ವನಿ ಎತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯ ಮೂಲಕ ಸ್ವಾವಲಂಬನೆ, ಸ್ವಾತಂತ್ರ್ಯ ಸಮಾನತೆ ಮತ್ತು ಘನತೆಯನ್ನು ಪ್ರತಿಪಾದಿಸುತ್ತಾ ಬಂದಿದೆ ಎಂದರು.
ಪ್ರೊ.ಬಿ.ಕೃಷ್ಣಪ್ಪನವರು ೧೯೭೪-೭೫ರಲ್ಲಿ ಜಾತಿರಹಿತ ವರ್ಗ, ಲಿಂಗರಹಿತ ಸಮಾಜ ರಚನೆಯ ಉದ್ದೇಶವನ್ನು ಹೊಂದಿ ಈ ಸಂಘಟನೆಯನ್ನು ಆರಂಭಿಸಿದ್ದಾರೆ. ಶೋಷಿತರ ವಿಮೋಚನೆಗಾಗಿ ಇಡೀ ರಾಜ್ಯಾದ್ಯಂತ ಹೋರಾಟ ಮಾಡಿದ್ದರು. ಅಂಬೇಡ್ಕರ್ ಕೂಡ ಸರ್ವಬಾಳು-ಸಮಪಾಲ ಎಂಬ ಸಾರ್ವಜನಿಕ ಸಮಾನತೆ ಸಾರುವ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಹಾಗಾಗಿ ಈ ಇಬ್ಬರ ಜನ್ಮದಿನಾಚರಣೆಗಳನ್ನು ನಮ್ಮ ಸಂಘಟನೆವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಪ್ರೊ.ಬಿ.ಕೃಷ್ಣಪ್ಪನವರ ೮೭ನೇ ಜನ್ಮದಿನವನ್ನು ಸಂವಿಧಾನ ಸಂರಕ್ಷಣಾ ಸಂಕಲ್ಪ ಸಮಾವೇಶವನ್ನಾಗಿ ಆಚರಿಸಲು ನಾವು ಬದ್ಧರಾಗಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಕೆ.ಎ. ರಾಜ್ಕುಮಾರ್, ಪ್ರಮುಖರಾದ ಪ್ರಕಾಶ್ ಲಿಗಾಡಿ, ಏಳುಮಲೈ, ನರಸಿಂಹಮೂರ್ತಿ, ಬಸವರಾಜ್ ಬೂದಿಗೆರೆ, ಆರ್. ಸಂದೀಪ್, ಮಹಾಲಿಂಗಪ್ಪ, ಗಿರೀಶ್, ಸುರೇಶ್ ಸೇರಿದಂತೆ ಹಲವರಿದ್ದರು.
ನಮ್ಮದೇ ಅಧಿಕೃತ ಸಂಘಟನೆ
ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ನಮ್ಮದೇ ಅಧಿಕೃತವಾಗಿದೆ. ಬೇರೆ ಯಾರು ಈ ಹೆಸರನ್ನು ಬಳಸಕೂಡದು ಅಲ್ಲದೆ ದಲಿತ ಸಂಘರ್ಷ ಸಮಿತಿ ಎಂಬ ಹೆಸರಿನಲ್ಲಿಯೂ ಕೂಡ ಯಾವುದೇ ಸಂಘಟನೆ ಇಲ್ಲ. ನಮ್ಮದೇ ಅಧಿಕೃತ. ಇದಕ್ಕೆ ನಮ್ಮ ಬಳಿ ಎಲ್ಲಾ ದಾಖಲೆಗಳು ಇವೆ ಎಂದು ಚಿನ್ನಯ್ಯ ತಿಳಿಸಿದ್ದಾರೆ.
ಪ್ರೊ.ಬಿ.ಕೃಷ್ಣಪ್ಪ ಹೆಸರನ್ನು ಬೇರೆ ಸಂಘಟನೆಯವರು ಇಟ್ಟುಕೊಂಡಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿಯವರ ಹೆಸರನ್ನು ಉಲ್ಲೇಖಿಸದೆ ಆತ ಯಾವುದೇ ಕಾರಣಕ್ಕೂ ಅವರ ಸಂಘಟನೆಗೆ ಬಿ. ಕೃಷ್ಣಪ್ಪ ಸ್ಥಾಪಿತ ಎಂದು ಇಟ್ಟುಕೊಳ್ಳಬಾರದು ಮತ್ತು ಆ ಹೆಸರನ್ನು ಬಳಸಿಕೊಳ್ಳಬಾರದು. ಇದಕ್ಕೆ ನಮ್ಮ ಬಳಿ ದಾಖಲೆ ಇದೆ ಎಂದರು.