ಶಿವಮೊಗ್ಗ: ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರು ಫಲಾನುಭವಿಗಳು ಹಾಗೂ ಖಾತಾದಾರರ ಸಮ್ಮುಖದಲ್ಲಿ 94 ಡಿ ಅರ್ಜಿಗಳ ವಿಚಾರಣೆ ನಡೆಸಿದರು.

ತಾಲ್ಲೂಕಿನ ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓತಿಘಟ್ಟ ಗ್ರಾಮದಲ್ಲಿ ಸೋಮವಾರ ನಡೆದ ವಿಚಾರಣಾ ಸಭೆಯಲ್ಲಿ ಖಾಸಗಿ ಹಾಗೂ ಖಾತೆ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ಸ್ಥಳೀಯ ದಾಖಲೆಗಳೊಂದಿಗೆ ಅನೇಕ ವರ್ಷಗಳಿಂದ ವಾಸವಾಗಿರುವ 97 ಜನರ ಅರ್ಜಿಗಳ ವಿಚಾರಣೆ ನಡೆಸಲಾಯಿತು.

ಈ ವೇಳೆ ಅನೇಕರು ಸರ್ವೆ ಕಾರ್ಯ ನಡೆಸುವಾಗ ಮನೆ ಹಾಗೂ ಜಾಗದ ಅಳತೆ ತಪ್ಪಾಗಿ ನಮೂದಿಸಲಾಗಿದೆ ಎಂದು ಅಪಸ್ವರ ವ್ಯಕ್ತಪಡಿಸಿದರು. ಈ ವೇಳೆ ಅಳತೆ ತಪ್ಪಾಗಿ ನಮೂದಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಮರು ಸರ್ವೆ ನಡೆಸುವುದಾಗಿ ಉಪವಿಭಾಗಾಧಿಕಾರಿ ಭರವಸೆ ನೀಡಿದರು.

ಈ ವೇಳೆ ಖಾತಾದಾರರು ಹಾಗೂ ಖಾಸಗಿ ಜಮೀನು ಮಾಲೀಕರು ತಮ್ಮ ಮಾಲೀಕತ್ವ್ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಜನರಿಗೆ ಹಕ್ಕುಪತ್ರ ನೀಡುವ ಬಗ್ಗೆ ನಮಗೆ ಅಭ್ಯಂತರ ಇಲ್ಲ. ಆದರೆ ನಮ್ಮ ಜಾಗಗಳಿಗೆ ಸರ್ಕಾರದಿಂದ ಸೂಕ್ತ ರೀತಿಯ ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿದರು.

ಈ ವೇಳೆ ಉಪ ತಹಶೀಲ್ದಾರ್ ಲತಾ, ಸೋಗಾನೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಶಾ ಪ್ರಸಾದ್, ಉಪಾಧ್ಯಕ್ಷರಾದ ಶೋಭಾ ಮೂರ್ತಿ, ಸದಸ್ಯರಾದ ರಾಜಶೇಖರಪ್ಪ, ಗೋವಿಂದರಾಜ್, ಹೇಮೇಶ್ ನಾಯ್ಕ್, ಅನಿಲ್ ಕುಮಾರ್ ಹಾಗೂ ಕಂದಾಯ ಅಧಿಕಾರಿ ಮಹಾರುದ್ರಪ್ಪ, ಗ್ರಾಮ ಲೆಕ್ಕಾಧಿಕಾರಿಗಳಾದ ರವಿ, ಹರ್ಷವರ್ಧನ್, ಫ್ರಭಾಕರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.