ಶಿವಮೊಗ್ಗ,ಮೇ.31:
ಪ್ರಸಕ್ತ 2025-26ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಬಹುತೇಕ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ. ಆದರೆ, ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಸಕಾಲದಲ್ಲಿ ಸಿಗದೇ ವಿದ್ಯಾರ್ಥಿಗಳು-ಪೋಷಕರು ಆತಂಕ್ಕೊಳಗಾಗುತ್ತಿದ್ದು, ಪ್ರಮಾಣಪತ್ರಗಳ ವಿಳಂಬವಾಗದೇ ತ್ವರಿತಗತಿಯಲ್ಲಿ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಯುವ ಕಾಂಗ್ರೆಸ್ ಆಗ್ರಹಿಸುತ್ತಿದೆ.

ಸರ್ಕಾರದ ನಿಯಮಾವಳಿಗಳಂತೆ ಯಾವುದೇ ಶಾಲಾ – ಕಾಲೇಜಿನ ಪ್ರವೇಶಕ್ಕೆ, ವಿದ್ಯಾರ್ಥಿ ನಿಲಯಗಳಲ್ಲಿ ಸೀಟು ಹಂಚಿಕೆಗೆ ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯವಾಗಿರುತ್ತದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಹೀಗೆ ಸಲ್ಲಿಸಿದ ಅರ್ಜಿಗಳ ವಿಲೇ ಮಾಡಲು ಅಧಿಕಾರಿಗಳಿಗೆ ಸಕಾಲ ನಿಯಮದಂತೆ 21 ದಿನಗಳ ಕಾಲಾವಕಾಶ ಇರುತ್ತದೆ. ಇದನ್ನೇ ನೆಪವಾಗಿಟ್ಟುಕೊಂಡಿರುವ ಅಧಿಕಾರಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ದಾಖಲೆಗಳನ್ನು ಒದಗಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.

ಈ ವಿಳಂಬದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಅದರಲ್ಲೂ ಗ್ರಾಮಾಂತರ ಕ್ಷೇತ್ರದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳ ಪ್ರವೇಶ ಸಿಗದೇ ಶಿಕ್ಷಣದಿಂದ ವಂಚಿತವಾಗುವ ಆತಂಕ ಎದುರಿಸುತ್ತಿದ್ದಾರೆ. ಆದ್ದರಿಂದ ತಹಶೀಲ್ದಾರರುವರು ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಮತ್ತು ಸಂಬಂಧಪಟ್ಟ ನೌಕರರ ಸಭೆ ಕರೆದು, ಸಮಾಲೋಚಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ತ್ವರಿತಗತಿಯಲ್ಲಿ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹರ್ಷಿತ್, ಕಿಸಾನ್ ಸೆಲ್ ಕಾರ್ಯಾಧ್ಯಕ್ಷ ಗಿರೀಶ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ S, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರವೀಣ್ ಗೌಡ, ಶಶಿಕುಮಾರ್ ಕೆ ಆರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವು ಮಲಗುಪ್ಪ, ಆಕಾಶ್, ವಿಷ್ಣು, ನಿಖಿಲ್, ನಾಗೇಂದ್ರ ಅಟೋಕ, ಬಾಲಾಜಿ ಹೆಚ್ ಶೆಟ್ಟಿ, ರಾಜೇಶ್, ಪ್ರಜ್ವಲ್, ಭುವನ್ ರಾಜ್, ಪ್ರೀತಮ್ ಸಾಕಷ್ಟು ಯುವ ಕಾರ್ಯಕರ್ತರು ಪಾಲ್ಗೊಂಡಿದ್ದರು