ಶಿವಮೊಗ್ಗ : ನಟ ಕಮಲ್ಹಾಸನ್ ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕರುನಾಡು ಸಂರಕ್ಷಣಾ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕಮಲ್ಹಾಸನ್ ಕನ್ನಡ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ಕನ್ನಡ ನಾಡು, ಭಾಷೆ ಬಗ್ಗೆ ತಿಳಿದುಕೊಂಡು ಆತ್ಮಾವಲೋಕನ ಮಾಡಿಕೊಳ್ಳಲಿ. ಸಿನಿಮಾ ರಂಗಕ್ಕೆ ಬಂದ ಆರಂಭದಲ್ಲಿ ಕಮಲ್ಹಾಸನ್ಗೆ ಅವಕಾಶ ನೀಡಿದ್ದು, ಕನ್ನಡ ಚಿತ್ರರಂಗ ಎನ್ನುವುದು ನೆನಪಿರಲಿ. ಕಾವೇರಿ ನೀರು ಕುಡಿದು ರಾಜ್ಯದ ಅನ್ನ ತಿಂದು, ಜೀವನ ಕಂಡುಕೊಂಡ ಕಮಲ್ಹಾಸನ್ ಕನ್ನಡ ಭಾಷೆಯ ಬಗ್ಗೆ ನಾಲಿಗೆ ಹರಿಯಬಿಟ್ಟಿರುವುದು ದುರಹಂಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಹೇಳಿಕೆಗಳನ್ನು ನೀಡುವುದನ್ನು ಕಮಲ್ಹಾಸನ್ ನಿಲ್ಲಿಸಬೇಕು. ಕೂಡಲೇ ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರಲ್ಲದೆ, ದ್ವಂದ್ವ ಹೇಳಿಕೆಗಳನ್ನು ನೀಡಿ, ಎರಡು ರಾಜ್ಯಗಳ ಮಧ್ಯ ವಿರಸವುಂಟುಮಾಡಿ, ಗಲಾಟೆ, ಆಸ್ತಿ-ಪಾಸ್ತಿಗಳಿಗೆ ನಷ್ಟವುಂಟಾದಲ್ಲಿ ಕಮಲ್ಹಾಸನ್ ಅವರೇ ಹೊಣೆಗಾರರಾಗುತ್ತಾರೆ ಎಂದು ಹೇಳಿದರು.

ಕಮಲ್ಹಾಸನ್ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕನ್ನಡ ನಟ-ನಟಿಯರಾದ ಶಿವರಾಜ್ ಕುಮಾರ್ ಮತ್ತು ರಮ್ಯಾ ಅವರು ಕಮಲ್ಹಾಸನ್ ಹೇಳಿಕೆಗೆ ಪ್ರತಿರೋಧ ತೋರದೆ ಸಮರ್ಥನೆ ಮಾಡಿಕೊಂಡಿರುವುದು ಖಂಡನೀಯ. ಕೂಡಲೇ ಅವರು ಕೂಡ ಕಮಲ್ಹಾಸನ್ ಹೇಳಿಕೆಯನ್ನು ಖಂಡಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಕಮಲ್ಹಾಸನ್ ನಟನೆಯ ಥಗ್ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಪ್ರಮುಖರಾದ ಎಸ್.ಪಿ. ಶಿವಮೂರ್ತಿ, ಹೆಚ್.ಎನ್. ಪ್ರಭು, ವೆಂಕಟೇಶ್, ಮೂರ್ತಿ, ರಾಜು, ಶಿವಣ್ಣ, ಮಂಜುನಾಥ್ ಕೆ.ಟಿ. ಇದ್ದರು.