ಸಾಗರ : ಆಡಳಿತಸೌಧ ಸರಿ ಇದ್ದರೆ ಸರ್ಕಾರಿ ಕೆಲಸಗಳೆಲ್ಲಾ ಸರಿಯಾಗಿ ಇರುತ್ತದೆ. ಆಡಳಿತ ಸೌಧದಲ್ಲಿ ನೀವು ಮಾಡುವ ಲೋಪದಿಂದ ಜನರು ಸಂಕಷ್ಟ ಎದುರಿಸುವಂತೆ ಆಗುತ್ತದೆ. ಜನರಿಂದ ದೂರು ಬಂದರೆ ನಿರ್ಧಾಕ್ಷಿಣ್ಯವಾಗಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಮಾಡಿ ನಂತರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಚೇರಿಗೆ ಬಂದ ಸಾರ್ವಜನಿಕರ ಜೊತೆ ಗೌರವದಿಂದ ನಡೆದುಕೊಳ್ಳುವುದುನ್ನು ನಿಮ್ಮ ಕಚೇರಿ ಸಿಬ್ಬಂದಿಗೆ ಹೇಳಿಕೊಡಿ ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ಗೆ ಖಾರವಾಗಿ ಹೇಳಿದರು.

ಮಳೆಗಾಲ ಬಂದಿರುವುದರಿಂದ ರಸ್ತೆ ಇಕ್ಕೆಲಗಳಲ್ಲಿ ಮರ ಬೀಳುವಂತಿದ್ದರೆ ಅದನ್ನು ತಕ್ಷಣ ತೆರವು ಮಾಡಲು ಅರಣ್ಯ ಇಲಾಖೆಗೆ ಅರ್ಜಿ ಕೊಡಿ ಎಂದು ಮೆಸ್ಕಾಂಗೆ ಸೂಚಿಸಿದ ಶಾಸಕರು, ಭದ್ರಾ ಕಂಪನಿಯ ವಿದ್ಯುತ್ ಕಂಬಗಳು ತೀರ ಕಳಪೆ ಎನ್ನುವ ದೂರು ಇರುವ ಹಿನ್ನೆಲೆಯಲ್ಲಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಸಂಬಂಧಪಟ್ಟ ಸಚಿವರಿಗೆ ತಿಳಿಸಲಾಗುತ್ತದೆ. ಮಳೆಗಾಲದಲ್ಲಿ ಜನರಿಗೆ ವಿದ್ಯುತ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ಜನರು ಫೋನ್ ಮಾಡುತ್ತಾರೆ ಎಂದು ನೀವು ಫೋನ್ ಸ್ವಿಚ್ ಮಾಡಿಕೊಂಡು ಬಿಡುತ್ತೀರಿ. ಜನಪ್ರತಿನಿಧಿಯಾಗಿ ನಾನು ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುವಂತಿಲ್ಲ. ಜನರ ದೂರುಗಳಿಗೆ ನಾನು ಉತ್ತರ ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಶರಾವತಿ ಹಿನ್ನೀರು ಪ್ರದೇಶದಲ್ಲಿ ಜನರಿಗೆ ಸರಿಯಾಗಿ ವಿದ್ಯುತ್ ಕೊಡಿ ಎಂದು ಮೆಸ್ಕಾಂಗೆ ಸೂಚನೆ ನೀಡಿದರು.

ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಜಯಂತ್ ಮಾತನಾಡಿ, ನಗರ ಹಾಗೂ ನಗರಕ್ಕೆ ಹೊಂದಿಕೊಂಡ ಗಡಿಗ್ರಾಮಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗಲಾಗುತ್ತಿದೆ. ಇದರಿಂದ ಪರಿಸರ ನೈರ್ಮಲ್ಯ ಉಂಟಾಗುವ ಜೊತೆಗೆ ಊರಿನ ಅಂದ ಕೆಡುತ್ತಿದೆ. ಕಸ ಒಯ್ಯುವ ಗಾಡಿ ಬರುತ್ತಿದ್ದರೂ ಕೆಲವರು ಚರಂಡಿಗೆ ಕಸ ಎಸೆಯುತ್ತಿದ್ದಾರೆ. ಅಂತಹವರಿಗೆ ದಂಡ ಹಾಕಿ ಎಂದು ಒತ್ತಾಯಿಸಿದರು. ಕಸ ಎಸೆದು ಹೋಗುವವರ ವಿರುದ್ದ ಮುಲಾಜಿಲ್ಲದೆ ನಗರಸಭೆಯಿಂದ ಕ್ರಮ ತೆಗೆದುಕೊಳ್ಳಿ. ಕಸ ಎಸೆದು ಹೋಗುವ ಕೆಲವು ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ. ಒಂದಿಬ್ಬರ ಮೇಲೆ ಕೇಸ್ ಹಾಕಿ ಎಂದು ನಗರಸಭೆ ಪೌರಾಯುಕ್ತರಿಗೆ ಶಾಸಕರು ಸೂಚಿಸಿದರು.

ಕಾಡನ್ನು ವಿಪರೀತವಾಗಿ ಕಡಿದಿರುವುದರಿಂದ ಕಾಡುಪ್ರಾಣಿಗಳು ತಮ್ಮ ಆಶ್ರಯ ಹುಡುಕಿ ನಾಡಿಗೆ ಬರುತ್ತಿದೆ. ಮನುಷ್ಯ ಮತ್ತು ಕಾಡುಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಕಾಡು ಕಡಿಯದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶೇ. ೩೧ರಷ್ಟು ಇರಬೇಕಾದ ಕಾಡಿನ ಪ್ರಮಾಣ ಶೇ. ೨೦ಕ್ಕೆ ಇಳಿದಿದೆ. ಇನ್ನು ಕಾಡು ಕಡಿಯಲು ಹೊಸದಾಗಿ ಒತ್ತುವರಿ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದು ಅರಣ್ಯ ಇಲಾಖೆಗೆ ಸೂಚಿಸಿದ ಶಾಸಕರು, ಮಳೆಗಾಲ ಹಿನ್ನೆಲೆಯಲ್ಲಿ ಶಾಲೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳಿಗೆ ನಿಗಾವಹಿಸಲು ತಿಳಿಸಿದೆ. ಬೀಡಾಡಿ ದನಗಳ ಗೋಶಾಲೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಗುರುತಿಸಿದ್ದ ಜಾಗವನ್ನು ಪರಿಶೀಲಿಸಿ, ಸುತ್ತಲೂ ಫೆನ್ಸಿಂಗ್ ಹಾಕಿ ಗೋರಕ್ಷಣೆಗೆ ಗಮನ ಹರಿಸುತ್ತೇವೆ. ಗೋವು ಸೇರಿದಂತೆ ಇನ್ನಿತರೆ ಹೆಸರಿನಲ್ಲಿ ನೈತಿಕ ಪೊಲೀಸ್ಗಿರಿ ಮಾಡುವುದನ್ನು ಸಹಿಸಿಕೊಳ್ಳುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಬದ್ದರಿದ್ದೇವೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆಬೀಜ ನೀಡಲಾಗಿದೆ. ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆಬೀಜ, ಗೊಬ್ಬರ ಸಂಗ್ರಹ ಮಾಡಲಾಗಿದೆ. ಮುಂಗಾರು ಪೂರ್ವ ಮಳೆಯಿಂದ ಸಾಕಷ್ಟು ಅನಾಹುತವಾಗಿದ್ದು, ಮೆಕ್ಕೆಜೋಳ ನಾಶವಾಗಿದೆ. ಕೆಲವು ಕಡೆಗಳಲ್ಲಿ ಭತ್ತದ ಬೆಳೆ ಸಹ ಹಾನಿಯಾಗಿದ್ದು, ಅಡಿಕೆಗೆ ಕೋಳೆರೋಗ ಭೀತಿ ಎದುರಾಗಿದೆ. ಅಧಿಕಾರಿಗಳಿಗೆ ಬೆಳೆ ಸಮೀಕ್ಷೆ ನಡೆಸಲು ತಿಳಿಸಿದೆ. ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆ ಆವರಣದಲ್ಲಿಯೆ ಕಾರ್ಯನಿರ್ವಹಿಸುವಂತೆ ಮಾಡಲು ಗಮನ ಹರಿಸಿ ಎಂದು ಆರೋಗ್ಯ ಸಚಿವರಿಗೆ ಮನವಿ ಮಾಡಿದೆ ಎಂದರು.
ಉಪವಿಭಾಗಾಧಿಕಾರಿ ವಿರೇಶಕುಮಾರ್, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್, ತಾಲ್ಲೂಕು ಪಂಚಾಯ್ತಿ ಆಡಳಿತಾಧಿಕಾರಿ ಸುಜಾತ ಇನ್ನಿತರರು ಹಾಜರಿದ್ದರು