ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಕ್ಷಕಿರಣ ಕೊಠಡಿಯ ಪಕ್ಕದಲ್ಲಿರುವ ಕೊಠಡಿಯಲ್ಲಿ ಅನಧಿಕೃತವಾಗಿ ಔಷಧಿಗಳನ್ನು ಸಂಗ್ರಹಿಸಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿಗಳಾದ ರುದ್ರೇಶ್ ಕೆ.ಪಿ., ಮತ್ತು ಸಿಬ್ಬಂದಿಗಳೊಂದಿಗೆ ಮೆಗ್ಗಾನ್ ಆಸ್ಪತ್ರೆಯ ಔಷಧ ದಾಸ್ತಾನು ವಿಭಾಗಕ್ಕೆ ಅನಿರೀಕ್ಷಿತ ಭೇಟಿ ನೀಡಲಾಯಿತು.

ಹಾಗೂ ಮೆಗ್ಗಾನ್ ಆಸ್ಪತ್ರೆಯ ಫಾರ್ಮಸಿ ಸಹಾಯಕ ನಿರ್ದೇಶರಾದ ಗೋಪಿನಾಥ್ ಅವರನ್ನು ವಿಚಾರಿಸಲಾಗಿ ಅವರು ಯಾವುದೇ ಸಮಂಜಸ ಮಾಹಿತಿ ಮತ್ತು ದಾಖಲಾತಿ ನೀಡಿರುವುದಿಲ್ಲ. ಹಾಗೂ ದಾಸ್ತಾನು ರಿಜಿಸ್ಟ್ರಾರ್ ನಲ್ಲಿಯೂ ಸಹ ನಮೂದು ಇಲ್ಲದೇ ಇರುವುದು ಕಂಡು ಬಂದಿದ್ದು, ಸದರಿ ಔಷಧಿಗಳ ಮೇಲೆ ನಾಟ್ ಫಾರ್ ಸೇಲ್ ಎಂದು ನಮೂದು ಇರುವುದಿಲ್ಲ.

ಎಲ್ಲಾ ಔಷಧಿಗಳ ಮೇಲೆ ಎಂ.ಆರ್.ಪಿ. ನಮೂದು ಇದ್ದು, ಇದು ಕಾನೂನುಬಾಹಿರವಾಗಿರುವುದು ಕಂಡುಬಂದಿರುತ್ತದೆ.

ಫಾರ್ಮಾಸಿಸ್ಟ್ ಗಳು ಈ ಬಗ್ಗೆ ಸಮಂಜಸ ಉತ್ತರ ನೀಡಿರುವುದಿಲ್ಲ. ಸದರಿ ಔಷಧಿಗಳ ಅಂದಾಜು ಮೌಲ್ಯ ಸುಮಾರು ೩.೫ ಲಕ್ಷ ರೂ. ಆಗಿರುತ್ತದೆ. ಈ ಬಗ್ಗೆ ಲೋಕಾಯುಕ್ತ ಪೊಲೀಸರು ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.