ಶಿವಮೊಗ್ಗ ,ಮೇ21: ಶಿಕಾರಿಪುರ ತಾಲೂಕಿನಲ್ಲಿ ಅಡಿಕೆ ಖೇಣಿದಾರರಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವಂತೆ ಶಿಕಾರಿಪುರ ತಾಲೂಕು ಅಡಿಕೆ ಬೆಳೆಗಾರರು ಒತ್ತಾಯಿಸಿದೆಯಲ್ಲದೆ, ಹೊರ ಊರಿನ ಅಡಿಕೆ ಖೇಣಿದಾರರು ತಾಲೂಕಿಗೆ ಬಂದು ಅಡಿಕೆ ಖರೀದಿ ಮಾಡಲು ಸಂಬಂಧ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಶಿಕಾರಿಪುರ ತಾಲೂಕು ಅಡಿಕೆ ಬೆಳೆಗಾರರ ಪರವಾಗಿ ಇಂದು ಬೆಣ್ಣೆ ಪ್ರವೀಣ್ ಅವರು ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಿಕಾರಿಪುರ ತಾಲೂಕಿನಲ್ಲಿ ಅಡಿಕೆ ಖೇಣಿದಾರರಿಂದ ರೈತರಿಗೆ ತೀವ್ರ ತರಹದ ಶೋಷಣೆ ನಡೆಯುತ್ತಿದೆ. ತಾವು ನಿಗಧಿ ಮಾಡಿದ ಬೆಲೆಗೆ ರೈತರು ಅಡಿಕೆ ನೀಡಬೇಕು, ಹಾಗೆಯೇ ಪ್ರತಿ ಕ್ವಿಂಟಾಲ್ ಹಸಿ ಅಡಿಕೆಗೆ 10 ಕೆ.ಜಿ. ರಾಶಿ ಅಡಿಕೆ ಹೆಚ್ಚುವರಿ ನೀಡಬೇಕು,10 ವರ್ಷ ಮೇಲ್ಪಟ್ಟ ತೋಟಕ್ಕೆ ಕ್ವಿಂಟಾಲ್ ಒಂದಕ್ಕೆ 11 ಕೆ.ಜಿ. ರಾಶಿ ಅಡಿಕೆ ಕೊಡಬೇಕೆಂದು ಷರತ್ತು ಹಾಕಿದ್ದಾರೆ. ಈ ರೀತಿಯ ಹಲವು ನಿಯಮ ತಂದು ರೈತರನ್ನು ಶೋಷಣೆ ಮಾಡುತ್ತಿದ್ದಾರೆಂದು ದೂರಿದರು

.
ತಾಲೂಕಿನ ಅಡಿಕೆ ಖೇಣಿದಾರರನ್ನು ಹೊರತು ಪಡಿಸಿ ಹೊರ ಊರಿನವರು ತಾಲೂಕಿಗೆ ಬರಬಾರದೆನ್ನುವ ನಿಟ್ಟಿನಲ್ಲಿ ತಾಲೂಕಿನ ಖೇಣಿದಾರರೆಲ್ಲ ಸೇರಿಕೊಂಡು ಖೇಣಿದಾರರ ಸಹಕಾರ ಸಂಘವೊಂದನ್ನು ರಚಿಸಿಕೊಂಡಿದ್ದಾರೆ. ಆ ಸಂಘದ ಮೂಲಕ 10 ನಿಮಯಗಳನ್ನು ಮುಂದಿಟ್ಟುಕೊಂಡು ಕರಪತ್ರ ಮುದ್ರಿಸಿ ತಾಲೂಕಿನಾದ್ಯಂತ ಹಂಚಿದ್ದಾರೆ. ಜತೆಗೆ ಹೊರ ಊರಿನ ಖೇಣಿದಾರರು ಶಿಕಾರಿಪುರ ತಾಲೂಕಿಗೆ ಬರಬಾರದು ಎಂದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು.
ಖೇಣಿದಾರರ ಈ ಕಿರುಕುಳ ವಿರುದ್ದ ಈಗಾಗಲೇ ತಾಲೂಕು ತಹಸೀಲ್ದಾರ್ ಅವರ ಗಮನಕ್ಕೆ ತರಲಾಗಿದೆ. ಅದಕ್ಕವರು ಪ್ರಕಟಣೆಯೊಂದನ್ನು ಹೊರಡಿಸಿ, ಯಾವುದೇ ರೈತರಿಗೆ ಅನಗತ್ಯ ಕಿರುಕುಳ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಕ್ಷೇತ್ರದ ಶಾಸಕರಾದ ಬಿ.ವೈ.ವಿಜಯೇಂದ್ರ ಹಾಗೂ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಗಮನಕ್ಕೂ ತರಲಾಗಿದೆ. ಅವರು ಅಡಿಕೆ ಬೆಳೆಗಾರರ ಪರವಾಗಿ ಇರುವುದಾಗಿ ಹೇಳಿದ್ದಾರೆ.ರೈತರಿಗೆ ಯಾರೇ ತೊಂದರೆ ಕೊಟ್ಟರೆ ಸಹಿಸುವುದಿಲ್ಲ ಎಚ್ಚರಿಸಿದ್ದಾರೆ. ಅದಕ್ಕಾಗಿ ಅವರಿಗೆ ತಾಲೂಕಿನ ಅಡಿಕೆ ಬೆಳೆಗಾರರು ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ತಾಲೂಕಿನ ಅಡಿಕೆ ಖೇಣಿದಾರರ ನಡವಳಿಕೆ ಸರಿಯಿಲ್ಲ ಎನ್ನುವುದು ನಮ್ಮ ದೂರು, ಅದರಾಚೆ ಹೊರ ಊರಿನ ಯಾವುದೇ ಖೇಣಿದಾರರು ಬಂದರೂ ಅವರಿಗೆ ಅಡಿಕೆ ಬೆಳೆಗಾರರ ಬೆಂಬಲ ಇರುತ್ತದೆ. ಅವರು ತಾಲೂಕಿಗೆ ಯಾವುದೇ ಅಂಚಿಕೆ, ಭಯವಿಲ್ಲದೆ ಬಂದು ಅಡಿಕೆ ಖರೀದಿ ಮಾಡಬಹುದು. ಅವರಿಗೆ ಅಡಿಕೆ ಬೆಳೆಗಾರರ ಬೆಂಬಲ ಇರುತ್ತದೆ. ಹಾಗೆಯೇ ಜಿಲ್ಲಾಡಳಿತವೂ ಕೂಡ ಅವರಿಗೆ ಭದ್ರತೆ ಒದಗಿಸುವ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಅಡಿಕೆ ಬೆಳೆಗಾರರಾದ ಮಹಾಲಿಂಗಪ್ಪ, ಮಂಜುನಾಥ್, ಸಂದೀಪ್ ಅಂಬಾರಗೊಪ್ಪ
ಇದ್ದರು.