ಶಿವಮೊಗ್ಗ : ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಭೋವಿ ಸಮಾಜದ ಜನರು ಕಡ್ಡಾಯವಾಗಿ ಪಾಲ್ಗೊಳ್ಳುವುದರ ಜತೆಗೆ ಯಾವುದೇ ಗೊಂದಲಕ್ಕೆ ಸಿಲುಕದೆ ಜಾತಿ ಕಾಲಂ ನಲ್ಲಿ ತಮ್ಮ ಮೂಲ ಜಾತಿ “ಭೋವಿ’ ಅಥವಾ ‘ವಡ್ಡರ’ ಎಂದೇ ನಮೂದಿಸಬೇಕೆಂದು ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಸಮೀಕ್ಷೆ ಕಾರ್ಯವು ಮೇ. 5 ರಿಂದಲೇ ಆರಂಭಗೊಂಡಿದೆ. ಅಂತೆಯೇ ಜಿಲ್ಲೆಯಲ್ಲೂ ಸಮೀಕ್ಷೆಗೆ ನಿಯೋಜಿತ ಗೊಂಡ ಸಿಬ್ಬಂದಿ ಮನೆ ಮನೆಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಜನರು ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳದೆ ಅಥವಾ ತಾತ್ಸಾರ ಮಾಡದೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಿದೆ. ಗಣತಿಗೆ ನಿಯೋಜಿತಗೊಂಡಿರುವ ಅಧಿಕಾರಿ ವರ್ಗದವರು ಕೂಡ ತಾತ್ಸಾರ ಮಾಡದೆ ಪರಿಶಿಷ್ಟ ವರ್ಗದ ಜನರು ಗಣತಿಯಲ್ಲಿ ತಮ್ಮ ದತ್ತಾಂಶ ದಾಖಲು ಮಾಡುವಂತೆ ಪ್ರೇರೆಪಿಸಬೇಕಿದೆ ಎಂದು ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಒಳ ಮೀಸಲು ಹಂಚಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಜಾತಿ ಗಣತಿ ಭೋವಿ ಸಮಾಜಕ್ಕೆ ಅತ್ಯಂತ ಮುಖ್ಯವಾಗಿದೆ.ಯಾಕೆಂದರೆ ಈ ಸಮೀಕ್ಷೆಯಲ್ಲಿನ ಜಾತಿವಾರು ಅಂಕೆ-ಅಂಶಗಳು ನಮ್ಮ ಸಮಾಜದ ಮುಂದಿನ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ಜಾತಿವಾರು ಜನಸಂಖ್ಯೆಯ ಆಧಾರದ ಮೇಲೆಯೇ ಒಳ ಮೀಸಲು ಹಂಚಿಕೆಯಾಗುವ ಸಾಧ್ಯತೆಗಳಿವೆ. ಹಾಗಾಗಿ ಸಮಾಜದ ಜನರನ್ನು ಸಮೀಕ್ಷೆ ಕಾರ್ಯದಿಂದ ಹೊರಗುಳಿಯದಂತೆ ಸಮಾಜದ ಗುರುಗಳಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಆಯಾ ಜಿಲ್ಲೆಗಳಲ್ಲಿ ಸಮಾಜದ ಮುಖಂಡರಿಗೆ ಈ ಜವಾಬ್ದಾರಿ ನೀಡಲಾಗಿದೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ಈ ಕೆಲಸ ಮಾಡುತ್ತಿದ್ದೇವೆ ಎಂದರು.

ಸಮೀಕ್ಷೆಯ ಸಂದರ್ಭದಲ್ಲಿ ಸಮೀಕ್ಷೆಗೆ ನಿಯೋಜಿತವಾದ ಸಿಬ್ಬಂದಿ ಆದಾರ್ ಕಾರ್ಡ್ , ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ ಕೇಳುತ್ತಿದ್ದಾರೆನ್ನಲಾಗಿದೆ. ಆದರೆ ಸರ್ಕಾರದ ನಿರ್ಧಿಷ್ಟ ಸೂಚನೆಗಳ ಮೇಲೆಯೇ ಸಮೀಕ್ಷೆದಾರರು ಜಾತಿವಾರು ದತ್ತಾಂಶಗಳನ್ನು ದಾಖಲು ಮಾಡಿಕೊಳ್ಳಬೇಕೆ ಹೊರತು, ಅವರ ನಿಚ್ಚೆಗೆ ಅನುಸಾರ ಮಾಹಿತಿ ಸಂಗ್ರಹಿಸುವಂತಿಲ್ಲ. ಈ ಬಗ್ಗೆಯೂ ಸಮಾಜದ ಮುಖಂಡರು ಎಚ್ಚರವಹಿಸಬೇಕಿದೆ ಎಂದ ಅವರು, ಸರ್ವರ್ ಪ್ರಾಬ್ಲಂ ಕಾರಣದಿಂದ ಸಮೀಕ್ಷೆಗೆ ತೊಂದರೆಯಾಗಿತ್ತು ಎನ್ನುವ ಕಾರಣಕ್ಕೆ ಮೇ 9 ರಂದು ಸಮಾಜದ ಮುಖಂಡರು ನ್ಯಾಯಮೂರ್ತಿ ಹೆಚ್.ಎನ್, ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಹೇಳಿದ್ದೇವೆ. ಸಮೀಕ್ಷೆಗೆ ಹೆಚ್ಚಿನ ಅವಧಿ ನೀಡುವಂತೆಯೂ ಕೇಳಿ ಕೊಂಡಿದ್ದೇವೆ ಎಂದು ವಿವರಿಸಿದರು.

ಸಮಾಜದ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರಿ ಮಾತನಾಡಿ, ಭೋವಿ ಎನ್ನುವ ಪದದಲ್ಲಿಯೇ ಸಣ್ಣ ಪುಟ್ಟ ವ್ಯತ್ಯಾಸ ಮಾಡಿಕೊಂಡು ಅನ್ಯ ಜಾತಿಯ ಜನರು ಸರ್ಕಾರಿ ಸೌಲಭ್ಯ ಪಡೆದ ಪ್ರಕರಣಗಳು ಇವೆ. ಈ ಬಗ್ಗೆ ಕೆಲವು ನ್ಯಾಯಾಲಯದ ಹಂತಕ್ಕೂ ಹೋಗಿವೆ. ಹಾಗಾಗಿ ಈ ಸಮೀಕ್ಷೆ ವೇಳೆ ಸಮಾಜದ ಜನರು ಭೋವಿ ಎನ್ನುವ ಪದವನ್ನು ಸರಿಯಾಗಿ ನಮೂದಿಸಬೇಕಿದೆ. ಅದು ಇಂಗ್ಲಿಷ್ ನಲ್ಲಾದರೆ …. ಸರಿಯಾಗಿ ದಾಖಲಿಸಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಜನರು ಕೂಡ ಜಾಗೃತರರ ವಹಿಸಬೇಕಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಕೆ.ಹರ್ಷ ಭೋವಿ, ವಿರೇಶ್ ಕ್ಯಾತಿನಕೊಪ್ಪ, ಚಂದ್ರಪ್ಪ ಕಲ್ಲುಗಂಗೂರು, ಗಣೇಶ್ ಇದ್ದರು.