
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 45
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ನಮ್ ಜಗತ್ತು ಎಷ್ಟು ವಿಚಿತ್ರ ಗೊತ್ತೇನ್ರಿ?,. ನಾವು ಏನೇನೋ ಅಂದುಕೊಳ್ಳುತ್ತೇವೆ,ಏನೇನೋ ಆಗುತ್ತೆ ಚಿತ್ರ ವಿಚಿತ್ರ ಮನಸ್ಸುಗಳು ಜಗತ್ತಿನ ಸುಳಿಯೊಳಗೆ ಬೇಕಿಲ್ಲದ ಹಾಗೂ ಬೇಕಿರುವ ಆಟಗಳ ನಡುವೆ ಪತರಗುಟ್ಟುತ್ತದೆ. ಕೆಲವರು ಕೈಲಾಗದಿದ್ದರೂ ಮೈಪರಚಿಕೊಳ್ಳುತ್ತಾರೆ ಎಂಬಂತೆ ಕೈಲಾಗದ, ತನ್ನ ಬುಡವಿಲ್ಲದ ಅಸ್ತಿತ್ವವನ್ನು ಮರೆ ಮಾಡಿ ದೊಡ್ಡ ನರಿ ಬುದ್ಧಿಯ ನಾಟಕವಾಡುತ್ತಾ ವಂಚನೆಯ ಗೆಲುವು ಸಾಧಿಸಲು ಯತ್ನಿಸುತ್ತಾರೆ. ಅದನ್ನು ಈ ಸಮಾಜ ಹೇಗೆ ತಾನೇ ಒಪ್ಪಿಕೊಳ್ಳಲು ಸಾಧ್ಯ. ಅದಕ್ಕೆ ತಿರುಗೇಟು ನೀಡುವ ಕ್ಷಣ ಬಂದೇ ಬರುತ್ತದೆ ಎಂಬುದು ಇಂದಿನ ನೆಗೆಟಿವ್ ಥಿಂಕಿಂಗ್ ವಾರದ ಅಂಕಣದ ವಿಷಯ.

ಇತ್ತೀಚಿನ ಕೆಲವು ಅವಧಿಗಳ ನಡುವೆ ಭಾರತ ಪಾಕಿಸ್ತಾನ ನಡುವಿನ ಕದನ ಅತ್ಯಂತ ಮಹತ್ತರ ವಿಷಯವೆನಿಸಿದೆ. ಭಾರತ ನಿಜಕ್ಕೂ ತಾಳ್ಮೆಯ ಹಾಗೂ ಜೀವರಾಶಿಯ ಉಳಿವಿನ ಚಿಂತನೆಯ ಪ್ರೀತಿ, ವಿಶ್ವಾಸದ ದೇಶ ಎಂಬುದನ್ನು ಇಡೀ ವಿಶ್ವವೇ ಒಪ್ಪಿಕೊಳ್ಳುತ್ತದೆ. ಸಹನೆ ತಾಳ್ಮೆ ಅತಿ ಹೆಚ್ಚು ನಮ್ಮ ದೇಶದ ದೊಡ್ಡ ಆಸ್ತಿ. ನಮ್ಮ ದೇಶದ ಸೈನಿಕರು ಸಹ ದೇಶದ ರಕ್ಷಣೆಯ ವಿಷಯದಲ್ಲಿ ಎಷ್ಟು ದೃಢ ನಿರ್ಧಾರ ತೆಗೆದುಕೊಳ್ಳುತ್ತಾರೋ, ಅಷ್ಟೇ ಮಾನವೀಯ ನೆಲೆಗಟ್ಟಿನ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.
ಇಂತಹ ಪುಣ್ಯಭೂಮಿ ಭಾರತಾಂಬೆ.

ಭಾರತದ ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರು ಹೋಗಿದ್ದಾಗ ಅಲ್ಲಿ ಮಕ್ಕಳು ಹಾಗು ಪತ್ನಿ ಎದುರೇ ಗಂಡನನ್ನು ಕೊಂದ ಘಟನೆ ಇಡೀ ದೇಶವನ್ನು ಉಗ್ರ ಸಂಘಟನೆಗಳ ವಿರುದ್ಧ ಸಿಡಿದೇಳುವಂತೆ ಮಾಡಿತು. ಆದರೂ ತಾಳ್ಮೆಯಿಂದ ವರ್ತಿಸಿ ಅದನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ನಮ್ಮ ದೇಶದ ಆಡಳಿತದ ಹಾಗೂ ದೇಶದ ಸೈನಿಕರ ಮೇಲೆ ನೀಡಿ ಸುಮ್ಮನಿತ್ತು.








ಅತ್ಯಂತ ತಾಳ್ಮೆಯ ಪ್ರತಿರೂಪವಾಗಿರುವ ಭಾರತ ದೇಶದ ರಕ್ಷಣಾ ಪಡೆ ಈ ಘಟನೆಯನ್ನು ಅತ್ಯಂತ ಉಗ್ರವಾಗಿಯೇ ಖಂಡಿಸಿ, ಅಲ್ಲಿನ ಉಗ್ರ ಸಂಘಟನೆಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಿದ್ದು ನಿಜಕ್ಕೂ ವಿಶೇಷವೇ ಹೌದು. ಆ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರ ಮೇಲಾಗಲಿ, ಅಲ್ಲಿನ ಜನರ ಮೇಲಾಗಲಿ ಯಾವುದೇ ಅಹಿತಕರ ಘಟನೆಗೆ ಮುಂದಾಗದಿದ್ದದ್ದು ನಮ್ಮ ದೇಶದ ಹಿರಿಮೆಯೇ ಹೌದು. ಅದು ಇಡೀ ವಿಶ್ವಕ್ಕೆ ಮಾದರಿಯಾದ ಸಂಗತಿಯೇ ಹೌದು.
ಆದರೆ ಕೈಲಾಗದಿದ್ದರೆ ಏನಂತೆ, ಸೈನ್ಯದ ಮೇಲೆ ಹೊಡೆದಾಡಬೇಕಾಗಿದ್ದ ಪಾಕಿಸ್ತಾನ ನಮ್ಮ ಗುಡಿ ಗೋಪುರಗಳ ಮೇಲೆ, ಅತಿ ಹೆಚ್ಚು ಜನ ಸೇರುವ ಸ್ಥಳಗಳ ಮೇಲೆ ನಾಗರೀಕರಿರುವ ಮನೆಗಳ ಮೇಲೆ ದಾಳಿ ನಡೆಸಿದ ಘಟನೆಯನ್ನು ಇಡೀ ವಿಶ್ವವೇ ಖಂಡಿಸುತ್ತದೆ.
ಇಲ್ಲಿಯವರೆಗೆ ಸುಮ್ಮನಿದ್ದ ಭಾರತ ಸರಿಯಾದ ತಿರುಗೇಟು ನೀಡಿದ್ದು ವಿಶೇಷವೇ ಹೌದು. ಸುಮ್ಮನಿರುತ್ತಾರೆ ಎಂದರೆ ಎಲ್ಲದಕ್ಕೂ ತಲೆ ಬಗ್ಗಿಸಿ ನಡೆಯುವುದಲ್ಲ ಎಂಬುದನ್ನು ತೋರಿಸಿದ್ದಾರೆ. ನಮ್ಮ ಶಕ್ತಿ ಇದೆ ಎಂಬುದನ್ನು ಬಹಿರಂಗಪಡಿಸದಿದ್ದರೂ, ಸುಖಾ ಸುಮ್ಮನೆ ನಮ್ಮನ್ನು ಮುಟ್ಟಿದ್ದಕ್ಕೆ ಗಂಭೀರವಾದ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನ ಈಗಲಾದರೂ ನರಿ ಬುದ್ಧಿಯನ್ನು ಬಿಟ್ಟರೆ ಒಳಿತು. ಯಾವಾಗಲೂ ಕಾಲು ಕೆರೆದು ಜಗಳಕ್ಕೆ ಬಂದು ತೀರಾ ಹಿಂಸೆ ಕೊಟ್ಟರೆ ಮುಂದೊಂದು ದಿನ ಅಲ್ಲಿ ಚಿಪ್ಪು ಹಿಡಿದು ಭಿಕ್ಷೆ ಬೇಡಲು ಜನರೇ ಇರುವುದಿಲ್ಲವೇ ಅನಿಸುತ್ತದೆ. ಏಕೆಂದರೆ ಸುಮ್ಮನೆ ಇದ್ದವರಿಗೆ ಸಿಟ್ಟು ಬರಬಾರದು.
ನಮ್ಮ ರಕ್ಷಣಾ ವ್ಯವಸ್ಥೆ ಇಡೀ ವಿಶ್ವದಲ್ಲಿ ಅತ್ಯಂತ ಶ್ರೇಷ್ಠ ಮಟ್ಟದಲ್ಲಿದ್ದರೂ ತಾಳ್ಮೆ ಹಾಗೂ ಶಾಂತಿಯ ಪ್ರತೀಕವಾಗಿರುವ ಭಾರತಾಂಬೆಯನ್ನು ಪದೇಪದೇ ಕೆಣಕುವ ಕೆಲಸವನ್ನು ಯಾರು ಮಾಡಬಾರದು, ನಮ್ಮಲ್ಲಿರುವ ಹೊಸ ಹೊಸ ಬಗೆಯ ಭಾರತದ ಯುದ್ಧೋಪಕರಣಗಳನ್ನು ಪ್ರಯೋಗಿಸಿದ ನಮ್ಮ ನಡೆ ನಿಜಕ್ಕೂ ಶ್ಲಾಘನೀಯವೆ ಹೌದು. ಅದು ನರಿ ಬುದ್ಧಿ, ಬಿಟ್ಟರೆ ಅತ್ಯಂತ ಒಳ್ಳೆಯದು ಅಲ್ಲವೇ?