ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸವಾಗಿರುವ ಪಾಕಿಸ್ತಾನದ ಪ್ರಜೆಗಳನ್ನು ಗುರುತಿಸಿ 24 ಗಂಟೆಯೊಳಗೆ ದೇಶದಿಂದ ಹೊರಹಾಕಬೇಕು ಎಂದು ಸಂಸದ ್ಯ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.

ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆಯ ಘಟನೆ ನಂತರ ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನ ವಿರುದ್ಧ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಆಯಾ ರಾಜ್ಯಗಳು ವಾಪಸ್ ಕಳಿಸುವಲ್ಲಿ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಂಡಿವೆ. ಕರ್ನಾಟಕ ಸೇರಿದಂತೆ ಬಿಜೆಪಿಯೇತರ ರಾಜ್ಯಗಳು ಈ ನಿಟ್ಟಿನಲ್ಲಿ ಇನ್ನೂ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.

ಪಹಲ್ಗಾಮ್ ನಲ್ಲಿ ಪ್ರವಾಸಿ ಹಿಂದೂಗಳನ್ನು ಭಯೋತ್ಪಾದಕರು ಕೊಂದಿದ್ದು, ಇದು ಪಾಕಿಸ್ತಾನದ ಬೆಂಬಲಿತ ಕೃತ್ಯವಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಐದು ಮಹತ್ವದ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದಾರೆ. ಅದರಂತೆ ಭಾರತದಲ್ಲಿನ ಪಾಕಿಸ್ತಾನ ಪ್ರಜೆಗಳು ದೇಶ ಬಿಟ್ಟು ಹೋಗುವಂತೆ ಗಡುವು ನೀಡಲಾಗಿದ್ದರೂ, ಕರ್ನಾಟಕದಲ್ಲಿ ಇನ್ನೂ ಸಾಕಷ್ಟು ಪಾಕಿಸ್ತಾನಿ ಪ್ರಜೆಗಳು ಓಡಾಡಿಕೊಂಡಿರುವುದು ಕಂಡು ಬರುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಪಾಕಿಸ್ತಾನಿ ಪ್ರಜೆಗಳಿರುವ ಮಾಹಿತಿ ಇದೆ. ಜಿಲ್ಲಾಡಳಿತ ಇವರನ್ನು ಗುರುತಿಸಿ ದೇಶ ಬಿಟ್ಟು ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಶಿವಮೊಗ್ಗ ಪ್ರವಾಸೋದ್ಯಮ ಹಬ್ ಮಾಡುವಲ್ಲಿ ಚಿಂತನೆ ನಡೆದಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮೇ 8 ರಂದು ಕೊಲ್ಲೂರಿಗೆ ಬರಲಿದ್ದು, ಕೊಲ್ಲೂರು ಮೂಕಾಂಬಿಕ ಕಾರಿಡಾರ್ ಯೋಜನೆಯ ಪ್ರಸ್ತುತಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸಲು ಮನವಿ ಮಾಡಿಕೊಳ್ಳಲಾಗುವುದು, ಶರಾವತಿ ಹಿನ್ನೀರಿನಲ್ಲಿ ವಾಟರ್ ಬೋಟಿಂಗ್, ಜೈನ ಬಸದಿಗಳ ಸಕ್ರ್ಯೂಟ್ ಮಾಡಿ ಪ್ರವಾಸಿಗರನ್ನು ಸೆಳೆಯುವ ಬಗ್ಗೆ ಸಚಿವರ ಗಮನ ಸೆಳೆಯಲಾಗುತ್ತಿದೆ ಎಂದರು.
ಸಿಗಂದೂರು ಸೇತುವೆಯನ್ನು ಜೂನ್ನಲ್ಲೇ ಉದ್ಘಾಟಿಸುವ ಬಗ್ಗೆ ಯೋಚಿಸುತ್ತಿದ್ದು, ಪ್ರಧಾನಮಂತ್ರಿ ಅವರÀನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಪ್ರಧಾನಮಂತ್ರಿ ಕಚೇರಿ ವರದಿ ಪಡೆಯುತ್ತಿದೆ ಎಂದು ತಿಳಿಸಿದರು.

ಜಾತಿ ಜನಗಣತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಜಾತಿ ಜನಗಣತಿಗೆ ಸಂಬಂಧಿಸಿದಂತೆ ಯಾವ ಕಾಪಿಯನ್ನೂ ಮಾಡಿಲ್ಲ. ಮೋದಿ ಅವರು ಎಲ್ಲಾ ಜಾತಿಗಳಿಗೂ ಸಮಾನ ಅವಕಾಶ ನೀಡಬೇಕೆಂದು ಮೊದಲ ಬಾರಿಗೆ ಜಾತಿಗಣತಿಯನ್ನು ಮಾಡಬೇಕೆಂದು ಹೇಳಿದ್ದಾರೆ. ಇದು ಸ್ವಾಗತಾರ್ಹ. ಕಾಂಗ್ರೆಸ್ ನವರು ಯಾವುದೋ ಧರ್ಮವನ್ನು ಎತ್ತಿಕಟ್ಟುವ ಉದ್ದೇಶದಿಂದ ಆ ಧರ್ಮದ ಜನಸಂಖ್ಯೆಯನ್ನು ಹೆಚ್ಚು ಸಂಖ್ಯೆಯಲ್ಲಿ ತೋರಿಸಬೇಕೆಂಬ ಹಿನ್ನಲೆಯಲ್ಲಿ ಜಾತಿ ಗಣತಿ ಮಾಡಬಾರದು ಎಂಬುದು ನಮ್ಮ ಉದ್ದೇಶವಷ್ಟೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಶಿವರಾಜು, ಹರಿಕೃಷ್ಣ, ಮಾಲತೇಶ್, ಪ್ರಮುಖರಾದ ಚಂದ್ರಶೇಖರ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.