ಶಿವಮೊಗ್ಗ: ವಚನ ಚಳುವಳಿಗೆ ಸಂಬಂಧಿಸಿದಂತೆ ಐತಿಹಾಸಿಕ ಸಂಗತಿಗೆ ಶಿವಮೊಗ್ಗ ನಗರ ಸಾಕ್ಷಿಯಾಗಲಿದೆ. ನಗರದ ಅಲ್ಲಮಪ್ರಭು ಬಯಲಿನಲ್ಲಿ ಏಕಕಾಲದಲ್ಲಿ ಒಂದು ಸಾವಿರ ವಚನಗಳನ್ನು ಹಾಡುವ `ಸಾವಿರದ ವಚನ’ ಕಾರ್ಯಕ್ರಮ ಇದೇ ತಿಂಗಳ 9ರ ಸಂಜೆ 5.30ಕ್ಕೆ ನಡೆಯಲಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಬಸವ ಜಯಂತಿ ಆಚರಣಾ ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕ ರುದ್ರೇಗೌಡರು ಮಾಹಿತಿ ನೀಡಿ, ಈ ಕಾರ್ಯಕ್ರಮಕ್ಕಾಗಿ ಅಲ್ಲಮ ಬಯಲಿನಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

ಅಲ್ಲಮಪ್ರಭು ಬಯಲಿನಲ್ಲಿ 260 ಅಡಿ ಅಗಲ ಹಾಗೂ 7 ಮೆಟ್ಟಿಲುಗಳ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಕಾರ್ಯಕ್ರಮಕ್ಕೆ 7-8 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಅಂದು ಕಾರ್ಯಕ್ರಮಕ್ಕೆ ಬರುವವರಿಗೆದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ
ಭಕ್ತಿ ಭಂಡಾರಿ, ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪದ ಕರ್ತೃ, ಕರ್ನಾಟಕದ ಸಾಂಸ್ಕೃತಿಕ ನಾಯಕ ಅಣ್ಣ ಬಸವಣ್ಣನವರ 38 ವಚನಗಳನ್ನು ಸಿ. ಅಶ್ವತ್ ಅವರು 8 ಹಾಡುಗಳ ರೂಪದಲ್ಲಿ `ಕೂಡಲಸಂಗಮ’ ಎಂಬ ಹೆಸರಿನಲ್ಲಿ ಹೊರತಂದಿದ್ದಾರೆ. ವ್ಯಕ್ತಿಯೊಬ್ಬ ಭಕ್ತಿಯ ಶಿಖರ ಏರುವ ರೂಪಕವಾಗಿ “ಕೂಡಲಸಂಗಮ” ದ ವಚನಗಳು ಮೂಡಿ, ಜನಪ್ರಿಯಗೊಂಡಿವೆ ಎಂದರು.

ಈ ಎಲ್ಲಾ ವಚನಗಳೂ ಸಾಂಸ್ಕೃತಿಕವಾಗಿ ಮಹತ್ವ ಉಳ್ಳವೂ ಮತ್ತು ಸದಾಗುನುಗುತ್ತಾ ಇರುವ ಗುಣವುಳ್ಳವೂ ಆಗಿರುವಂತವು. ಇಂತಹ ವಿಶಿಷ್ಟ ವಚನಗಳನ್ನು ಒಂದೇ ವೇದಿಕೆಯಲ್ಲಿ ಸಾವಿರ ಕಂಠಗಳು ಹಾಡುವ ಹಾಗೂ ಕೇಳುವುದು ರೋಮಾಂಜನಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಅಲ್ಲಮಪ್ರಭುಗಳು, ಅಕ್ಕಮಹಾದೇವಿ, ಗೊಗ್ಗಯ್ಯ, ಸತ್ಯಕ್ಕಮೊದಲಾದ 40 ಕ್ಕೂ ಹೆಚ್ಚ್ಕಿನ ಶರಣರತವರಾಗಿದೆ. ಶಿವಮೊಗ್ಗ ನಗರವನ್ನು “ಬಸವ ಜಯಂತಿ ಆಚರಣೆಯ ಜಾಗತಿಕ ಕೇಂದ್ರ”ವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಚಿಂತನೆಯನ್ನು ಬಸವ ಜಯಂತಿ ಆಚರಣಾ ಸಮಿತಿ ಹೊಂದಿದೆ ಹಾಗೂ ಅದರ ಫಲವಾಗಿ ಬಸವೋತ್ಸವ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು.
ಬಸವಕೇಂದ್ರದ ಶ್ರೀ ಮನಿಪ್ರಡಾ. ಬಸವ ಮರುಳಸಿದ್ದ ಸ್ವಾಮೀಜಿಯವರು, `ಸಾವಿರದ ವಚನ’ ಕಾರ್ಯಕ್ರಮ ಯಾವುದೋ ಒಂದು ಜಾತಿಗೆ ಸೀಮಿತವಾದ ಉತ್ಸವವಲ್ಲ ಬದಲಿಗೆ ಬಸವತತ್ವ ಆರಾಧಕರ, ಒಪ್ಪುವವರ ಮತ್ತು ಬಯಸುವವಲ್ಲರ ಉತ್ಸವ ಎಂದರು.
ಈ ಕಾರ್ಯಕ್ರಮದಲ್ಲಿ ವಚನಗಳನ್ನು ಹಾಡುವವರಿಗಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಕೋರಿಕೊಳ್ಳಲಾಗಿತ್ತು. ಸಾವಿರದ ಇನ್ನೂರಕ್ಕೂ ಹೆಚ್ಚು ಜನ ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ದೂರದ ಊರುಗಳಾದ ಚೆನ್ನೈ, ಬೆಂಗಳೂರು, ಕೊಪ್ಪಳ, ಹುಬ್ಬಳ್ಳಿ, ವಿಜಯಪುರ, ರಾಯಚೂರು, ಬೀರೂರು, ದಾವಣಗೆರೆ, ಶಿರಾಳಕೊಪ್ಪ, ಶಿಕಾರಿಪುರ, ತರೀಕೆರೆ, ಭದ್ರಾವತಿ ಹಾಗೂ ಇನ್ನೂ ಹಲವು ಊರುಗಳಿಂದ ಗಾಯಕರು ಬರುತ್ತಿದ್ದಾರೆ ಎಂದು ವಿವರಿಸಿದರು.

ಸಿ. ಅಶ್ವಥ್ ಅವರ ರಾಗಸಂಯೋಜನೆಯಲ್ಲಿ ಗಾಯಕರಾಗಿ ಹಾಡಿದ್ದ ಮೈಸೂರಿನ ಜನಾರ್ದನ್ (ಜನ್ನಿ) ಅವರು, ಶಿವಮೊಗ್ಗದವರೇ ಆದ ಕೆ ಯುವರಾಜ್ ರವರು, ಸಿ. ಅಶ್ವಥ್ ಅವರ ಸಹಾಯಕರಾಗಿದ್ದ ಬೆಂಗಳೂರಿನ ಸುದರ್ಶನ್, ಚಿಕ್ಕಮಗಳೂರಿನ ಮಲ್ಲಿಗೆ ಸುಧೀರ್ ಕಾರ್ಯಕ್ರಮಕ್ಕೆ ಜೊತೆಯಾಗಿದ್ದಾರೆ. ಶಿವಮೊಗ್ಗದ ಪ್ರಖ್ಯಾತ ಸಂಗೀತ ವಿದ್ವಾಂಸರು ಒಟ್ಟಾಗಿ ತರಬೇತಿ ಹಾಗೂ ಕಾರ್ಯಕ್ರಮದ ಸಾರಥ್ಯವಹಿಸಿದ್ದಾರೆ. ವಿದ್ವಾನ್ ನಾಗರಾಜ್ ಗುರುಗುಹ, ಜಯಶ್ರೀ ಶ್ರೀಧರ್, ನಾಗರತ್ನ ಟಿ ಜೆ, ಪ್ರಹ್ಲಾದ್ ದೀಕ್ಷಿತ್, ಸುರೇಖಾ ಹೆಗ್ಡೆ, ಮಹೇದ್ರ ಗೋರೆ, ವಿನಯ್ ಯಜ್ಞನಾರಾಯಣ, ಉಮಾ ದಿಲೀಪ್ ಹಾಗೂ ಇನ್ನು ಹಲವು ಸಂಗೀತ ವಿದ್ವಾಂಸರು ಸಾವಿರಾರು ಜನರಿಗೆ ಕಳೆದ ಹತ್ತಾರು ದಿನಗಳಿಂದ ತರಬೇತಿ ನೀಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿದ್ದ ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರಮಹಾಸ್ವಾಮೀಜಿ ಮಾತನಾಡಿ, ಅಣ್ಣ ಬಸವಣ್ಣನವರ ಹಾಗೂ ಇತರ ಶರಣರತತ್ವಗಳು ಹಿಂದೆಂದಿಗಿಂತಲೂ ಇಂದು ಮನುಕುಲಕ್ಕೆ ಅತ್ಯಗತ್ಯವಾಗಿಬೇಕಾಗಿವೆ. ಆ ನಿಟ್ಟಿನಲ್ಲಿ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
: ಕಾರ್ಯಕ್ರಮದ ವೈಶಿಷ್ಟ್ಯಗಳು:
• ವಚನಗಳ ಸಾಂಸ್ಕೃತಿಕ, ತಾತ್ವಿಕ ಮತ್ತು ಸಾಮಾಜಿಕ ಅರ್ಥವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಮಹತ್ವದ ಪ್ರಯತ್ನ.
• ಸಾಮೂಹಿಕ ಗಾಯನದ ಮೂಲಕ ಸಾಮರಸ್ಯ, ಸೌಹಾರ್ದತೆ ಹಾಗೂ ಶರಣ ಪರಂಪರೆಯ ಮೌಲ್ಯಗಳ ಪ್ರಭಾವಶಾಲಿ ಪ್ರಚಾರ.
• ಸ್ಥಳೀಯ ಕಲಾವಿದರು, ವಿದ್ಯಾರ್ಥಿಗಳು ಹಾಗೂ ವಚನಾಸಕ್ತರು ಭಾಗವಹಿಸುವ ಬೃಹತ್ ಸಂಘಟಿತಕಾರ್ಯಕ್ರಮ.
• ಬಸವತತ್ವದೊಂದಿಗೆ ಸಂಗೀತದ ಸಮನ್ವಯ— ಮನಸ್ಸಿಗೆ ಸ್ಪರ್ಶಿಸುವ ಅನನ್ಯ ಅನುಭವ.
• ಎಲ್ಲ ಜಾತಿ ವರ್ಗ, ವರ್ಣ, ಧರ್ಮ, ಲಿಂಗ, ಕಾಯಕದ ಸಮಾನತೆ ಇರುವ ವೇದಿಕೆ.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಗಣ್ಯರು:
ಬಸವ ಜಯಂತಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಸಮಿತಿಯ ಖಜಾಂಚಿಗಳಾದ ಹೆಚ್.ಸಿ. ಯೋಗೀಶ್, ಡಾ. ಧನಂಜಯ ಸರ್ಜಿ, ತಮ್ಮಡಿಹಳ್ಳಿ ನಾಗರಾಜ್, ಮೋಹನ್ ಬಾಳೆಕಾಯಿ, ಸಿದ್ದೇಶ್, ಕಿರಣ್, ಶಂಕರಪ್ಪ, ಸಂತೋಷ್ ಇನ್ನಿತರರು ಇದ್ದರು.
*ಸಾವಿರದ ವಚನಕ್ಕೆ ಏಕತಾರಿ ಹಿಡಿದ ಬಸವಣ್ಣ*
ಸಾವಿರದ ವಚನ ಕಾರ್ಯಕ್ರಮಕ್ಕೆ ಬಸವಣ್ಣನವರ ವಿಶೇಷ ಚಿತ್ರವನ್ನು ಬಳಸಲಾಗುತ್ತಿದೆ. ಈ ಚಿತ್ರದಲ್ಲಿ ಬಸವಣ್ಣ ಏಕತಾರಿ ಹಿಡಿದು ಗಾಯನಕ್ಕೆ ಕೂತಿದ್ದಾರೆ.
ಎನ್ನ ಕಾಯವ ದಂಡಿಗೆಯ ಮಾಡಯ್ಯ
ಎನ್ನ ಶಿರವ ಸೋರೆಯ ಮಾಡಯ್ಯ
ಎನ್ನ ನರಗಳ ತಂತಿಯ ಮಾಡಯ್ಯ
ಬತ್ತೀಸ ರಾಗವ ಹಾಡಯ್ಯ
ಉರದಲೊತ್ತಿ ಬಾರಿಸು ಕೂಡಲಸಂಗಮದೇವ.
ಎಂದು ಒಂದು ವಚನದಲ್ಲಿ ಬರೆದಿದ್ದಾರೆ. ಭಕ್ತಿ- ಅರ್ಪಣಾ ಮನೋಭಾವದ ಪರಾಕಾಷ್ಠೆಯಲ್ಲಿ ನನ್ನನ್ನು ಒಂದು ತಂತಿವಾದ್ಯವನ್ನಾಗಿ ಮಾಡಿಕೊಂಡು ಬತ್ತೀಸ ರಾಗಗಳನ್ನು ನುಡಿಸು ಎಂದು ಕೂಡಲಸಂಗಮದೇವನಲ್ಲಿ ಮೊರೆ ಇಡುತ್ತಾರೆ. ಇದರರ್ಥ, ಬಸವಣ್ಣ ಅವರಿಗೆ ವಾದ್ಯಗಳು ಹಾಗೂ ರಾಗಗಳ ಪರಿಚಯ ಇತ್ತು. ಅಲ್ಲದೆ, ಇನ್ನೊಂದು ವಚನದಲ್ಲಿ ‘ಆನು ಒಲಿದಂತೆ ಹಾಡುವೆ’ ಎಂದು ಹೇಳುತ್ತಾರೆ. ಇದಲ್ಲದೆ, ಹಲವು ಸ್ವರ ವಚನಗಳನ್ನೂ ಬರೆದಿದ್ದಾರೆ. ರಾಗ- ತಾಳಗಳ ಬಳಕೆ ಈ ವಚನಗಳಲ್ಲಿದೆ. ಈ ಎಲ್ಲಾ ಅಂಶಗಳು ಬಸವಣ್ಣ ಅವರಿಗೆ ಸಂಗೀತ ಪ್ರಜ್ಞೆ ಇತ್ತು ಹಾಗು ಬಸವಣ್ಣ ಹಾಡುತ್ತಿದ್ದರು ಎಂಬುದನ್ನು ಪುಷ್ಠೀಕರಿಸುತ್ತವೆ. ಈ ಹಿನ್ನಲೆಯಲ್ಲಿ ಖ್ಯಾತ ಕಲಾವಿದರಾದ ಶ್ರೀಕಾಂತ ಹೆಗಡೆ ಅವರು ಸಂಗೀತಗಾರ ಬಸವಣ್ಣ ಅವರ ಅದ್ಭುತ ಚಿತ್ರ ರಚಿಸಿದ್ದಾರೆ. ಸಾಂಸ್ಕೃತಿಕ ನಾಯಕ ಬಸವಣ್ಣ ಇಲ್ಲಿ ನಮಗೆ ಸಂಗೀತಗಾರ, ಗಾಯಕ ರಾಗಿ ಇನ್ನೊಂದು ರೂಪದಲ್ಲಿ ಕಾಣುತ್ತಾರೆ…