ಶಿವಮೊಗ್ಗ, ಮೇ.05:
ಶಿಕ್ಷಣ ವಿಭಾಗದ ಸಂಪೂರ್ಣ ನಿರ್ವಹಣೆಯಲ್ಲಿ ನನಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿನ 625 ಅಂಕಗಳನ್ನು ಕೊಡದಿದ್ದದ್ದರೂ ಪರವಾಗಿಲ್ಲ. 624 ಅಂಕಗಳನ್ನು ಕೊಡಿ ಸಾಕು. ಏಕೆಂದರೆ ಇಲ್ಲಿ ಅತ್ಯಂತ ಕಷ್ಟಪಟ್ಟು ಪ್ರಾಮಾಣಿಕವಾಗಿ ಎಲ್ಲ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದಂತಹ ವಾತಾವರಣವನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹಾಗೂ ಅದರ ಮೂಲಭೂತ ಸೌಕರ್ಯವನ್ನು ಹೆಚ್ಚಿಸಲಾಗುತ್ತಿದೆ
ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿಜವಾಗಿಯೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ಪಲಿತಾಂಶ ಅತ್ಯಂತ ಖುಷಿ ನೀಡಿದೆ. ಆ ಮಕ್ಕಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಸಕಾಲದಲ್ಲಿ ನೀಡಲಾಗಿದೆ.

ಹೆಚ್ಚುವರಿ ಅಂಕ ಪಡೆಯುವ ಅವಕಾಶವನ್ನು ಸಹ ಕೊಡಲಾಗಿದೆ. ಎಲ್ಲಾ ಕಡೆ ಆರ್ಥಿಕ ಹೊರೆ ಆದರೂ ಸಹ ನಾನು ಮುಖ್ಯಮಂತ್ರಿಗಳ ಅನುಮತಿ ಪಡೆದು ಪರೀಕ್ಷೆ ಕಟ್ಟುವ ಶುಲ್ಕವನ್ನು ಮನ್ನಾ ಮಾಡಿಸಿದ್ದೇನೆ. ನಿಜವಾಗಿಯೂ ನನಗೆ ಅತ್ಯಂತ ಖುಷಿ ನೀಡಿದೆ ಎಂದು ಹೇಳಿದರು.

ದೇವಸ್ಥಾನದ ಗಂಟೆ ಹೊಡೆಯುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಶಾಲೆಯ ಗಂಟೆ ಸಕಾಲದಲ್ಲಿ ಹೊಡೆಯಬೇಕು ಅದರಿಂದ ಇಂದಿನ ಮಕ್ಕಳು ಮುಂದಿನ ಸತ್ಪ್ರಜೆಗಳಾಗಿ ಶಿಕ್ಷಣ ಪಡೆದು ಬೆಳೆಯಬೇಕು ಎಂಬುದು ನನ್ನ ಮಹತ್ತರ ಉದ್ದೇಶ. ಎಲ್ಲಾ ನನ್ನ ಬಳಗದ ಶಿಕ್ಷಕ ವೃಂದದವರಿಗೆ ಅಧಿಕಾರಿಗಳಿಗೆ ಪ್ರಸಕ್ತ ವರ್ಷದ ಯಶಸ್ವಿ ಹಾಗೂ ಪಿಯುಸಿ ಪರೀಕ್ಷೆಯ ಯಶಸ್ವಿಗೆ ಕಾರಣಕರ್ತರಾದ ಎಲ್ಲರಿಗೂ ಆತ್ಮೀಯ ಅಭಿನಂದನೆಗಳು ಎಂದರು.