ಶಿವಮೊಗ್ಗ : ಜನಗಣತಿ ಜತೆಗೆ ಜಾತಿ ಗಣತಿಗೂ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತಾವು ಸ್ವಾಗತಿಸುವುದಾಗಿ ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ತಮ್ಮದೇ ಸರ್ಕಾರದ ಯೋಜನೆಯನ್ನು ಕೇಂದ್ರ ಸರ್ಕಾರ ಕಾಪಿ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸುವುದಾಗಿ ವ್ಯಂಗ್ಯವಾಡಿದರು.

ಅವರು ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿ ಮಾತನಾಡಿ, ದೇಶದಲ್ಲಿ ಜನಗಣತಿ ನಡೆಯಬೇಕಿದೆ. ಹಾಗೆಯೇ ಜಾತಿ ಗಣತಿಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದರು. ಇದೇ ವೇಳೆ ಅವರು, ರಾಜ್ಯ ಸರ್ಕಾರದ ಜಾತಿ ಸಮೀಕ್ಷೆ ಬಗ್ಗೆ ಬಂದ ಟೀಕೆಗಳನ್ನು ಪ್ರಸ್ತಾಪಿಸಿ, ವಿಪಕ್ಷ ಬಿಜೆಪಿ ವಿರುದ್ದ ಹರಿಹಾಯ್ದರು.

‘ನಾವು ಒಳ್ಳೆಯ ನಿರ್ಧಾರವನ್ನು ಯಾವಾಗಲೂ ಸ್ವಾಗತಿಸುತ್ತೇವೆ. ಆ ಸರ್ಕಾರ, ಈ ಸರ್ಕಾರ ಅಂತ ನೋಡುವುದಿಲ್ಲ, ಆದರೆ ಬಿಜೆಪಿಯವರಿಗೆ ಇಂತಹ ಗುಣವೇ ಇಲ್ಲ, ಅವರಿಗೆ ತಮ್ಮದ್ದಲ್ಲದೂ ಯಾವತ್ತಿಗೂ ಕೆಟ್ಟದ್ದಾಗಿಯೇ ಕಾಣುತ್ತದೆ. ಅದರೆ ವಾಸ್ತವ ಹಾಗಿರುತ್ತಾ? ನಾವು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಾಗ ಹಾಗಾಯ್ತು, ಹೀಗಾಯ್ತು, ರಾಜ್ಯ ದಿವಾಳಿ ಆಯ್ತು ಅಂದ್ರು, ಕೊನೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆ ಬಂದಾಗ ರಾಜ್ಯದ ಗ್ಯಾರೆಂಟಿ ಯೋಜನೆಗಳನ್ನೇ ಕಾಪಿ ಮಾಡಿದರು. ಜಾತಿ ಗಣತಿ ವಿಚಾರದಲ್ಲೂ ಹಾಗೆಯೇ ಆಗಿದೆ ಎಂದು ಕಟುಕಿದರು.

ಬಿಜೆಪಿ ಜಾತಿ ಗಣತಿಗೆ ವಿರುದ್ದವಾಗಿದ್ದರು. ದೇಶದಲ್ಲಿ ಜಾತಿ ಗಣತಿ ಆಗಬೇಕೆಂದು ರಾಹುಲ್ ಗಾಂಧಿ ಅವರು ಹೇಳಿದ್ದಾಗ ಲೇವಡಿ ಮಾಡಿದ್ದರು. ಈಗ ಈಗ ದೇಶದಲ್ಲಿ ಜನಗಣತಿ ಜತೆಗೆ ಜಾತಿ ಗಣತಿ ಮಾಡುವುದಾಗಿ ಹೇಳಿದ್ದಾರೆ. ಅವರ ವಿಲಕ್ಷಣ ಮನಸ್ಥಿತಿಗೆ ಇದು ಸಾಕ್ಷಿ ಎಂದು ಕಿಡಿಕಾರಿದರು.

ಅಂಬೇಡ್ಕರ್ ಮತ್ತು ಸಂವಿಧಾನದ ಆಶಯದಂತೆ ದೇಶದ ದಲಿತ, ಹಿಂದುಳಿದ, ಶೋಷಿತ ಸೇರಿದಂತೆ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಜಾತಿ ಸಮೀಕ್ಷೆ ತುಂಬಾ ಅಗತ್ಯ. ಯಾರು ಯಾವ ಸ್ಥಿತಿಯಲ್ಲಿದ್ದಾರೆಂಬುದು ಗೊತ್ತಾಗಬೇಕು. ಆ ನಿಟ್ಟಿನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ಆಯೋಗ ರಚಿಸಿದ್ದರು. ಅದೇ ಆಯೋಗವು ಸುಮಾರು ೫೪ ಅಂಶಗಳನ್ನು ಮುಂದಿಟ್ಟುಕೊAಡು ತಯಾರಿಸಿದ ವರದಿ ಈಗ ಸರ್ಕಾರದ ಮುಂದಿದೆ.ಅದರ ಜಾರಿಗೆ ನಮ್ಮ ಸರ್ಕಾರ ಬದ್ದವಾಗಿದೆ. ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಆರ್ಥಿಕ , ಸಾಮಾಜಿಕ ಮತ್ತು ಶೈಕ್ಷಣಿಕ ಅಂಶಗಳನ್ನು ಮುಂದಿಟ್ಟುಕೊAಡು ಜಾತಿ ಸಮೀಕ್ಷೆ ನಡೆಸಲಿ ಎನ್ನುವುದು ನಮ್ಮ ಮನವಿ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೇಂದ್ರಕ್ಕೂ ಮನವಿ ಮಾಡಿದ್ದಾರೆ. ಅದನ್ನು ಅವರು ಹೇಗೆ ತೆಗೆದುಕೊಳ್ಳುತಾರೋ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕಾಂಗ್ರೆಸ್ ಮುಖಂಡರಾದ ಕಲ್ಲುಗೋಡು ರತ್ನಾಕರ್, ಚಂದ್ರ ಭೂಪಾಲ್, ಕಲಿಂ ಪಾಶಾ, ಮಧು, ರಮೇಶ್ ಇಕ್ಕೇರಿ, ದೇವಿ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.