ಶಿವಮೊಗ್ಗ: ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ರಾದವರಿಗೆ ಮೇಣದ ಬತ್ತಿ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದರು.
ಶುಕ್ರವಾರ ಸಂಜೆ ಎಎ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು ಶೀನಪ್ಪ ಶೆಟ್ಟಿ ವೃತ್ತದ ವರೆಗೆ ಮೇಣದ ಬತ್ತಿಯ ದೀಪದೊಂದಿಗೆ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭಯೋತ್ಪಾದನೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು. ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರಹಾಕಿದರು.

ಶೀನಪ್ಪ ಶೆಟ್ಟಿ ವೃತ್ತದಲ್ಲಿ ಸಭೆ ಸೇರಿ ಹುತಾತ್ಮ ಮಂಜುನಾಥ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಕಾಂಗ್ರೆಸ್ ಮುಖಂಡರು ಜೊತೆ ಜೊತೆಗೆ ಕೇಂದ್ರ ಸರ್ಕಾರವೇ ಈ ಘಟನೆಯ ಹೊಣೆ ಹೊರಬೇಕು. ಇದು ಸಂಪೂರ್ಣ ಭದ್ರತಾ ವೈಫಲ್ಯ ಎಂದರು.

ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ ಭದ್ರತಾ ವೈಫಲ್ಯದ ಜೊತೆಗೆ ನಾವು ಮಾತನಾಡಲೇಬೇಕಾಗಿದೆ. ಭಯೋತ್ಪಾದಕರು ದಾಳಿ ನಡೆಸಿದ ಜಾಗದಲ್ಲಿ ಭದ್ರತಾ ಸಿಬ್ಬಂದಿಗಳೇ ಇರಲಿಲ್ಲ. ಭಯೋತ್ಪಾದನೆ ತಡೆಯುತ್ತೇವೆ ಎಂದ ಪ್ರಧಾನ ಮಂತ್ರಿಗಳು ಸುಳ್ಳು ಹೇಳಿದ್ದಾರೆ ಅಷ್ಟೆ. ಸರ್ಕಾರದ ನಡೆಗೆ ನಮ್ಮ ಖಂಡನೆ ಇದೆ. ಆದರೆ ಕೇಂದ್ರ ಸರ್ಕಾರದ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಮಾತನಾಡಿ, ಘಟನೆಯ ನಂತರ ಬಿಜೆಪಿ ಪಕ್ಷದ ಹಲವು ಮುಖಂಡರು ಇದನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದು ಬಿಟ್ಟು ಚುನಾವಣೆಯ ಸಭೆಗೆ ಹೋಗಿದ್ದರು ಎಂದು ದೂರಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ ಇದೊಂದು ಭದ್ರತಾ ವೈಫಲ್ಯವೇ ಆಗಿದೆ. ಕೇಂದ್ರ ಸರ್ಕಾರಕ್ಕೆ ಅಧಿಕಾರದ ದಾಹವಿದೆ. ಎಲ್ಲ ವಿಪಕ್ಷಗಳು ಭಯೋತ್ಪಾದನೆಯ ವಿರುದ್ಧವೇ ಇದ್ದೇವೆ. ಇಲ್ಲಿ ಪಕ್ಷ ಬೇಧ ಇರುವುದಿಲ್ಲ. ಇದು ಖಂಡನೀಯ ಎಂದರು. ಶಿವಮೊಗ್ಗ ಶಾಸಕ ಚನ್ನಬಸಪ್ಪನವರು ಅಸಂವಿಧಾನಿಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ದೀಪವನ್ನು ಬೆಳಗಿಸಬೇಕೇ ಹೊರತು ಬೆಂಕಿಯನ್ನು ಹಚ್ಚಬಾರದು ಎಂದರು. ಸಭೆಯಲ್ಲಿ ದಕ್ಷಿಣ ಬ್ಲಾಕ್ ಅಧ್ಯಕ್ಷ ಕಲೀಂ ಪಾಷಾ, ಎಚ್.ಸಿ.ಯೋಗೀಶ್ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ, ಕೆಪಿಸಿಸಿ ಸದಸ್ಯ ಇಸ್ಮಾಯಿಲ್ ಖಾನ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಮುಖರಾದ ಜಿ.ಡಿ.ಮಂಜುನಾಥ್, ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಎಂ.ಪಿ.ದಿನೇಶ್ ಪಟೇಲ್, ಶರತ್ ಮರಿಯಪ್ಪ, ಎಸ್.ಟಿ.ಹಾಲಪ್ಪ, ಯು.ಶಿವಾನಂದ್, ಯಮುನಾ ರಂಗೇಗೌಡ, ವಿಜಯಲಕ್ಷ್ಮೀ ಪಾಟೀಲ್, ರೇಖಾ ರಂಗನಾಥ್, ಕೆ.ರಂಗನಾಥ್, ಮಧುಸೂದನ್, ಪಿ.ಎಸ್.ಗಿರೀಶ್ ರಾವ್, ಚೇತನ್ ಮೊದಲಾದವರಿದ್ದರು.