ಶಿವಮೊಗ್ಗ: ನಗರದ ಹಿರಿಯ ವಕೀಲ ಮೋಹನ್ ಕುಮಾರ್ ಬಿ.ಜಿ. ಹಾಗೂ ನಿವೃತ್ತ ಪ್ರಾಧ್ಯಾಪಕಿ ಡಾ.ಎ.ಎಸ್. ವತ್ಸಲಾ ಅವರ ಪುತ್ರಿ ಬಿ.ಎಂ. ಮೇಘನಾ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ೪೨೧ನೇ ರ್ಯಾಂಕ್ ಪಡೆದ ಶಿವಮೊಗ್ಗ ನಗರಕ್ಕೆ ಕೀರ್ತಿ ತಂದಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಇಂದು ಅವರ ಮನೆಗೆ ಭೇಟಿ ನೀಡಿ ಮೇಘನಾ ಅವರಿಗೆ ಸಿಹಿ ತಿನ್ನಿಸಿ ಅಭಿನಂದಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಎಲ್ಲರ ಶುಭ ಹಾರೈಕೆ ಮತ್ತು ಸಹಕಾರದಿಂದ ಮೇಘನಾ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಇದು ಯುವಕರು, ಯುವತಿಯರಿಗೆ ಸ್ಪೂರ್ತಿಯಾಗಲಿ. ಅವರು ಇದುವರೆಗೆ ನಮ್ಮ ನಗರದ ಆಸ್ತಿಯಾಗಿದ್ದರು.

ಇನ್ನು ರಾಜ್ಯ ಮತ್ತು ದೇಶದ ಆಸ್ತಿಯಾಗಿ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.

ಮೇಘನಾ ಮಾತನಾಡಿ, ೫ನೇ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಕನ್ನಡ ಸಾಹಿತ್ಯ ವಿಷಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದೆ. ಪ್ರತಿದಿನ ಕನಿಷ್ಠ ಒಂದು ಗಂಟೆ ಓದುತ್ತಿದ್ದೆ. ಪ್ರತಿ ಬಾರಿಯೂ ನನಗೆ ನಿರಾಶೆ ಆಗುತ್ತಿತ್ತು. ತುಸು ಕಷ್ಟವಾದರೂ ಕನ್ನಡದಲ್ಲೇ ತೇರ್ಗಡೆಯಾಗಬೇಕೆಂದು ನಿರ್ಧರಿಸಿದ್ದೆ. ಸಾಮಾನ್ಯ ವಿಷಯವನ್ನು ಒತ್ತು ಕೊಟ್ಟು ಓದಿದ್ದರಿಂದ ಕನ್ನಡ ಸಾಹಿತ್ಯ ತಿಳಿದುಕೊಳ್ಳಲು ಸಹಕಾರಿಯಾಯಿತು ಎಂದರು.

ಈ ಸಂದರ್ಭದಲ್ಲಿ ಅವರ ತಂದೆ ಮೋಹನ್ ಕುಮಾರ್ ಬಿ.ಜಿ., ತಾಯಿ ಡಾ.ಎ.ಎಸ್. ವತ್ಸಲಾ ಪ್ರಮುಖರಾದ ಕೆ.ಇ. ಕಾಂತೇಶ್, ಇ. ವಿಶ್ವಾಸ್, ಶ್ರೀಕಾಂತ್, ಬಾಲು, ಬಿ.ಟಿ. ರಾಜು, ರಮೇಶ್, ಚಂದ್ರಪ್ಪ, ನಾಗರಾಜ್, ಶೇಖರ್, ಚಂದ್ರಶೇಖರ್, ರಾಜಪ್ಪ, ಶರತ್, ಡಿ.ಎಸ್. ಮಂಜುನಾಥ್ ಇದ್ದರು.