ಶಿವಮೊಗ್ಗ : ಎಪ್ರಿಲ್ ೨೩ : : ಜಿಲ್ಲೆಯ ಜನರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ, ಅಗತ್ಯ ಸಹಕಾರ ನೀಡಲು ನಗರದ ಹೃದಯ ಭಾಗದಲ್ಲಿ ಸಚಿವರ ನೂತನ ಕಚೇರಿಯನ್ನು ಆರಂಭಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಶಿವಪ್ಪನಾಯಕ ವಾಣಿಜ್ಯ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಸದರಿ ಕಚೇರಿಯಲ್ಲಿ ವಿಧಾನ ಪರಿಷತ್ಸದಸ್ಯೆ ಶ್ರೀಮತಿ ಬಲ್ಕಿಶ್ಬಾನು, ರಾಜ್ಯ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದು, ಕಚೇರಿಗೆ ಭೇಟಿ ನೀಡುವ ಜನರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಲಿದ್ದಾರೆ ಎಂದ ಅವರು, ಅವರ ಅಗತ್ಯಗಳಿಗೆ ಸಚಿವರ ಕಾರ್ಯಾಲಯದ ಸಿಬ್ಬಂಧಿಗಳು ಸಹಕರಿಸಲಿದ್ದಾರೆ ಎಂದರು.

ಜಮ್ಮು-ಕಾಶ್ಮೀರದ ಪಹಲ್ಗಾಮ್ನ ಕಣಿವೆ ಪ್ರದೇಶದಲ್ಲಿ ನಡೆದ ಭಯೋತ್ಪಾದಕರ ಕೃತ್ಯದಲ್ಲಿ ರಾಜ್ಯದ ಮೂರು ಮಂದಿ ಬಲಿಯಾಗಿದ್ದು, ಅದರಲ್ಲೂ ಶಿವಮೊಗ್ಗದ ಮಂಜುನಾಥ್ಅವರು ದುಷ್ಟರ ದಾಳಿಗೆ ಬಲಿಯಾಗಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಅಮಾನವೀಯ ಕೃತ್ಯವನ್ನು ಖಂಡಿಸುವುದಾಗಿ ತಿಳಿಸಿದ ಅವರು, ಇಂದು ಬೆಳಿಗ್ಗೆ ಮೃತ ಮಂಜುನಾಥ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಾಗಿದೆ. ರಾಜ್ಯ ಸರ್ಕಾರವು ಅವರ ನೋವಿಗೆ ಸ್ಪಂದಿಸುತ್ತದೆ. ಅಲ್ಲದೇ ರಾಜ್ಯ ಸರ್ಕಾರದ ವತಿಯಿಂದ ರಾಜ್ಯ ಕಾರ್ಮಿಕ ಸಚಿವ ಸಂತೋಷ್ಲಾಡ್ಅವರು ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ಥರ ನೆರವಿಗೆ ಧಾವಿಸಿರುವುದಾಗಿ ತಿಳಿಸಿದರು. ಮೃತರ ಕಳೆಬರಹವನ್ನು ನಾಳೆ ಬೆಳಿಗ್ಗೆ ಹೊತ್ತಿಗೆ ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯವೂ ನಡೆದಿದೆ ಎಂದರು.

ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಆಯಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಸಾರ್ವಜನಿಕರೂ ಕೂಡ ಇಂತಹ ಸಂದರ್ಭಗಳಲ್ಲಿ ಸರ್ಕಾರದೊಂದಿಗೆ ಸಹಕರಿಸಬೇಕು. ಅಲ್ಲದೇ ಪ್ರಸ್ತುತ ಸಂದರ್ಭದಲ್ಲಿ ಉತ್ತರ ರಾಜ್ಯಗಳ ಪ್ರವಾಸ ಕೈಗೊಂಡಿದ್ದಲ್ಲಿ ಸುರಕ್ಷತೆಯ ಕಾರಣದಿಂದಾಗಿ ತಾತ್ಕಾಲಿಕವಾಗಿ ಮುಂದೂಡುವುದು ಕ್ಷೇಮಕರ ಎಂದವರು ನುಡಿದರು. ಮೃತ ಮಂಜುನಾಥ್ಅವರ ಪುತ್ರ ಪ್ರತಿಭಾವಂತನಾಗಿದ್ದು, ಅವರ ಉನ್ನತ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಜಾತಿಗಣತಿ : ಕಳೆದ ಒಂದು ದಶಕದ ಹಿಂದೆ ನಡೆಸಲಾದ ಸಾಮಾಜಿಕ, ಆರ್ಥಿಕ ಗಣತಿ ಬಗ್ಗೆ ಪ್ರತಿ ವ್ಯಕ್ತಿಗಳಲ್ಲಿ ಅಭಿಪ್ರಾಯ ಬೇಧಗಳಿವೆ. ಆದರೆ ಅರ್ಥಪೂರ್ಣವಾದ ೫೪ ಮಾನದಂಡಗಳೊಂದಿಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ವಿವರಗಳ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ದೃಷ್ಟಿಯಿಂದ ಸಮೀಕ್ಷೆಯ ಪ್ರತಿಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸುವಂತೆಯೂ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿರುವುದಾಗಿ ಅವರು ತಿಳಿಸಿದ ಅವರು, ಅದಕ್ಕೂ ಮುನ್ನ ಎಲ್ಲಾ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸುವಂತೆಯೂ ತಿಳಿಸಲಾಗಿದೆ ಎಂದರು.
ಈಗಾಗಲೇ ನಡೆಸಲಾಗಿರುವ ಸಮೀಕ್ಷೆಯು ಎಲ್ಲಾ ವರ್ಗ, ಜಾತಿ ಸಮುದಾಯಗಳಿಗೆ ಸೌಲಭ್ಯಗಳನ್ನು ಒದಗಿಸಿಕೊಡುವ ಸದುದ್ದೇಶದಿಂದ ಕೂಡಿದ್ದಾಗಿದೆ. ಇದರಲ್ಲಿ ಎಲ್ಲರನ್ನೂ ಒಳಗೊಂಡು ಎಲ್ಲಾ ಸಮುದಾಯಕ್ಕೆ ಮಾನ್ಯತೆ ನೀಡಲಾಗಿರುವುದು ಕಂಡುಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ಸದಸ್ಯೆ ಶ್ರೀಮತಿ ಬಲ್ಕಿಶ್ಬಾನು, ರಾಜ್ಯ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.