ಸಾಗರ : ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ೫೦ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲಾ ರೈತ ಸಂಘವು ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಜನಸ್ಪಂದನಾ ಕಾರ್ಯಕ್ರಮ ನಡೆಸಲು ಸಿದ್ದತೆ ಮಾಡಿಕೊಂಡಿತ್ತು. ಆದರೆ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಕಚೇರಿ ಆವರಣದಲ್ಲಿ ಜನಸ್ಪಂದನಾ ನಡೆಸಲು ಅವಕಾಶ ನೀಡಿರಲಿಲ್ಲ. ಸಂಘವು ರಸ್ತೆ ಪಕ್ಕದಲ್ಲಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸ್ಥಳಕ್ಕೆ ಅಹವಾಲು ಸ್ವೀಕರಿಸಲು ಯಾವುದೇ ಅಧಿಕಾರಿಗಳು ಬಂದಿಲ್ಲವೆಂದು ರೈತ ಸಂಘವು ತಹಶೀಲ್ದಾರ್ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿ, ಅಲ್ಲಿಯೆ ಅಡುಗೆ ಮಾಡಿ ಊಟ ಮಾಡುವ ಮೂಲಕ ಅಹೋರಾತ್ರಿ ಧರಣಿ ನಡೆಸಲು ಸಿದ್ದತೆ ಮಾಡಿಕೊಂಡಿತ್ತು. ಆದರೆ ಸಂಜೆ ವೇಳಿಗೆ ಪ್ರತಿಭಟನೆ ನಿರತ ೫೦ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ತಾಲ್ಲೂಕಿನಲ್ಲಿ ಪ್ರತಿಭಟನಾನಿರತ ರೈತರನ್ನು ಎರಡನೇ ಬಾರಿಗೆ ಬಂಧಿಸಲಾಗುತ್ತಿದೆ. ಇದಕ್ಕೆ ರೈತರು ಹೆದರುವುದಿಲ್ಲ. ರೈತರ ಸಮಸ್ಯೆ ಬಗೆಹರಿಸಿ ಎಂದು ಪ್ರತಿಭಟನೆ ನಡೆಸಿದರೆ ನಮ್ಮನ್ನೆ ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ದುರಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದ ಪ್ರತಿಭಟನೆ : ಯಾರಿಗೋ ಕಳಿಸುವ ನೋಟಿಸನ್ನು ತಮಗೆ ಕಳಿಸಿರುವ ಲೋಕೋಪಯೋಗಿ ಇಲಾಖೆ ಕ್ರಮವನ್ನು ಖಂಡಿಸಿ ಮಂಗಳವಾರ ರೈತ ಸಂಘದ ವತಿಯಿಂದ ವಾದ್ಯದ ಮೇಲೆ ನೋಟಿಸ್ ಇರಿಸಿಕೊಂಡು ಮೆರವಣಿಗೆ ಮೂಲಕ ಕಚೇರಿಗೆ ಬಂದು ವಿನೂತನ ಪ್ರತಿಭಟನೆ ನಡೆಸಲಾಯಿತು.

ತಾಳಗುಪ್ಪ ಗ್ರಾಮದ ಮಾರುತಿನಗರ ರಸ್ತೆಯ ಮೋರಿ ಗುಂಡಿಗೆ ಅಳವಡಿಸಿದ್ದ ಕಬ್ಬಿಣ ಗ್ರಿಲ್ ಬ್ಯಾರಿಕೇಡ್ ತೆಗೆದಿದ್ದೀರಿ ಎಂದು ನನಗೆ ನೋಟಿಸ್ ನೀಡಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ. ಈ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿ ಕೇಳಿದರೆ ಕೈತಪ್ಪಿನಿಂದ ನೋಟಿಸ್ ಬಂದಿದೆ ಎಂದು ಹೇಳುತ್ತಿದ್ದಾರೆ. ಸಾಗರದಲ್ಲಿ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ ಮನೆಘಟ್ಟ, ಭದ್ರೇಶ್ ಬಾಳಗೋಡು, ಚಂದ್ರು ಪೂಜಾರಿ, ನಾರಾಯಣಪ್ಪ, ಕೃಷ್ಣಮೂರ್ತಿ ಇನ್ನಿತರರು ಹಾಜರಿದ್ದರು.