ಹೊಸನಗರ: ಯಾವುದೇ ದುರಂತ ಸಂಭವಿಸಿದರೆ ತಕ್ಷಣ ಹೊಸನಗರ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಹಾಗೂ ಅಗ್ನಿ ಶಾಮಕ ದಳದ ಠಾಣೆಗೆ ತಿಳಿಸಿ ಬಾರೀ ದುರಂತ ತಪ್ಪಿಸಿ ಎಂದು ಹೊಸನಗರದ ಅಗ್ನಿಶಾಮಕ ಠಾಣಾಧಿಕಾರಿ ಆನಂದಪ್ಪರವರು ತಿಳಸಿದರು.
ಹೊಸನಗರ ಅಗ್ನಿಶಾಮಕ ಠಾಣೆಯ ವತಿಯಿಂದ ಏಪ್ರೀಲ್ ೧೪ ರಿಂದ ೨೦ ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹವನ್ನು ಆಚರಿಸಲಾಗುತ್ತಿದ್ದು ಹೊಸನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರಿಗೆ ಜಾಗೃತಿ ಮೂಡಿಸಿ ಮಾತನಾಡಿದರು.

ಅಗ್ನಿಶಮನ ಕಾರ್ಯದಲ್ಲಿ ಹುತಾತ್ಮರಾದ ಅಗ್ನಿಶಾಮಕ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗೌರವ ಸಲ್ಲಿಸುವ ಪ್ರಯುಕ್ತ ಠಾಣೆಯಲ್ಲಿ ೦೨ ನಿಮಿಷ ಮೌನಾಚರಣೆ ಮಾಡಲಾಯಿತು. ನಂತರ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಲಾಯಿತು.

ನಂತರ ಮಾತನಾಡಿದ ಆನಂದಪ್ಪನವರು ಈ ಅಗ್ನಿಶಾಮಕ ಸೇವಾ ಸಪ್ತಾಹದ ಉದ್ದೇಶ ೧೪ ಎಪ್ರೀಲ್ ೧೯೪೪ ರಂದು ಮುಂಬೈನ ವಿಕ್ಟೋರಿಯಾ ಡಾಕ್ ಬಂದರಿನಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ’ಎಸ್.ಎಸ್. ಪೋರ್ಟ ಸ್ಪೈಕೈನ್’ ಎಂಬ ಹಡಗು ಘೋರ ಅಗ್ನಿ ದುರಂತಕ್ಕೆ ಒಳಗಾಗಿದ್ದು, ಆ ಬೆಂಕಿಯನ್ನು ನಂದಿಸಲು ಮುಂಬೈನ ಪೈರ್ ಬ್ರೀಗೇಡ್ನ ಅಧಿಕಾರಿ/ ಸಿಬ್ಬಂದಿಯವರು ಕಾರ್ಯ ನಿರತರಾದ ಸಂದರ್ಭದಲ್ಲಿ ಹಡಗು ಸ್ಪೋಟಗೊಂಡು ೬೬ ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ವೀರ ಮರಣ ಹೊಂದಿರುತ್ತಾರೆ. ಈ ಹುತಾತ್ಮರ ನೆನಪಿಗಾಗಿ ಪ್ರತಿ ವರ್ಷ ರಾಜ್ಯಾದ್ಯಂತ ಎಪ್ರೀಲ್ ೧೪ ರಿಂದ ೨೦ ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹವನ್ನು ಆಚರಿಸಲಾಗುತ್ತಿದ್ದು ಅದರಂತೆ ಹೊಸನಗರ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಆಚರಿಸಲಾಗಿರುತ್ತದೆ. ಈ ಸಪ್ತಾಹದಲ್ಲಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆಯ ಬಗ್ಗೆ

ತಿಳುವಳಿಕೆ ನೀಡಿ, ತಿಳುವಳಿಕೆಯ ಕರಪತ್ರ ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಸಾರ್ವಜನಿಕರಿಗೆ ಜನ ವಸತಿ ಪ್ರದೇಶಗಳಿಗೆ ಮತ್ತು ಹಳ್ಳಿಗಳು, ಕಾರ್ಖಾನೆ, ಮಾಲ್, ಪೆಟ್ರೋಲ್ ಬಂಕ್ಗಳಿಗೆ ತೆರಳಿ ಅಗ್ನಿಶಮನ ವಿಚಾರಗಳ ಬಗ್ಗೆ ಉಪನ್ಯಾಸ ಮತ್ತು ಅಣಕು ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಕೊಡಿಗೆ ಆಪಾರವಾಗಿದೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಅಗ್ನಿಶಾಮಕ ವಾಹನದೊಂದಿಗೆ ಜಾಥಾವನ್ನು ಸಹ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಜಾಗೃತಿಯಿಂದ ಜೀವನ ಸಾಗಿಸುವ ಕಾರ್ಯಕ್ರಮ ಇದಾಗಿದ್ದು ಸಾರ್ವಜನಿಕರು ನಮ್ಮೊಂದಿಗೆ ಕೈಜೊಡಿಸಬೇಕೆಂದರು.

ಈ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಶ್ರೀ ಆನಂದಪ್ಪ ಎನ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶ್ರೀ ಕೆ.ಟಿ. ರಾಜಪ್ಪ ಮತ್ತು ಸಿಬ್ಬಂದಿಗಳಾದ ಶ್ರೀ ಜೆ ರವಿ, ಸುರೇಶಗೌಡ ಪಾಟೀಲ್, ನರೇಶ ಎಸ್ ಖಾರ್ವಿ, ಪ್ರವೀಣಕುಮಾರ ಬಿ, ರವೀಂದ್ರ ಕೆ, ಶಿವರಾಜ್ ಬಿ ಜೆ, ಸುಭಾಷಚಂದ್ರ ಎಂ.ಪಿ., ಮಂಜುನಾಥ ಬಿ, ಆಂಜನೇಯ ಬಿ.ಸಿ, ಬೀಷ್ಮಾಚಾರಿ ಕಮ್ಮಾರ, ಹೇಮಂತಕುಮಾರ ಟಿ.ಜೆ ಬಾಗವಹಿಸಿದರು.