
ಶಿವಮೊಗ್ಗ.ಏ.11 ಮಲೆನಾಡು ಬಯಲುಸೀಮೆಯಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ಅತಿ ಅವಶ್ಯಕವಾಗಿದ್ದು ಸೂಡಾ ವತಿಯಿಂದ ನಗರ ಹಸುರೀಕರಣಗೊಳಿಸಲು ಉದ್ಯಾನವನ ಅಭಿವೃದ್ದಿ, ಗಿಡ ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹೇಳಿದರು.
ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಬಡಾವಣೆಯ ಪಕ್ಕದ ಪೊಲೀಸ್ ಲೇಔಟ್ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅಂದಾಜು ಮೊತ್ತ ರೂ.25 ಲಕ್ಷದಲ್ಲಿ ಈ ಉದ್ಯಾನವನ ಪ್ರದೇಶಕ್ಕೆ ಫೌಂಡೇಶನ್ ಸಹಿತ ಕಾಂಪೌAಡ್ ಗೋಡೆ ನಿರ್ಮಾಣ ಮತ್ತು ಮುಂಭಾಗದಲ್ಲಿ ಟೈಲ್ಸ್ ಅಳವಡಿಸಲಾಗುವುದು. ಈ ಪಾರ್ಕಿನಲ್ಲಿ ಬನ್ನಿ, ಮುತ್ತುಗ, ಪಾರಿಜಾತ, ಸುರಗಿ, ಬಿಲ್ವ, ನಾಗಲಿಂಗ ಪುಷ್ಪ, ಮಾವು, ತೆಂಗು ಸೇರಿದಂತೆ ಅನೇಕ ವಿಶೇಷವಾದ ಗಿಡ ಮರಗಳಿದ್ದು ನೀರಿಗಾಗಿ ಬೋರ್ವೆಲ್ ಮತ್ತು ಪಾಥ್ವೇ ಅಗಲೀಕರಣಕ್ಕೆ ನಿವಾಸಿಗಳು ಮನವಿ ಮಾಡಿದ್ದು ಒಟ್ಟು ರೂ.50 ಲಕ್ಷ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ ಎಂದ ಅವರು ಎಲ್ಲರೂ ತಮ್ಮ ಮನೆಗಳ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕೆಂದು ಕರೆ ನೀಡಿದರು.
ನಂತರ ಗೋಪಾಳ ಬಡಾವಣೆಯ ಚಂದನ ಉದ್ಯಾನವನ ಅಭಿವೃದ್ದಿಗಾಗಿ ರೂ.15 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಉದ್ಯಾನವನದಲ್ಲಿ ಹಳೆಯ ಹೊರಾಂಗಣ ಸಾಮಗ್ರಿಗಳನ್ನು ತೆಗೆದು ಪುನರ್ ಅಳವಡಿಕೆ ಮತ್ತು ಪ್ಲಾಟ್ಫಾರ್ಮ್ ನಿರ್ಮಾಣದೊಂದಿಗೆ ಹೊಸದಾಗಿ 05 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಸಲಾಗುವುದು ಎಂದರು.

ಗೋಪಾಳ ಬಡಾವಣೆಯ ಸಿ ಮತ್ತು ಎಫ್ ಬ್ಲಾಕ್ ಉದ್ಯಾನವನಗಳ ಅಭಿವೃದ್ದಿಗಾಗಿ ರೂ.25 ಲಕ್ಷ ಮೊತ್ತದ ಕಾಮಗಾರಿ ಕೈಗೊಳ್ಳಲಿದ್ದು ಸಿ-ಬ್ಲಾಕ್ ಉದ್ಯಾನವನದಲ್ಲಿ 6 * 9 ಮೀ. ಅಳತೆಯ ಮೇಲ್ಚಾವಣಿಯೊಂದಿಗೆ ಯೋಗ ಮಂಟಪ ನಿರ್ಮಾಣ, ಸಿ ಮತ್ತು ಎಫ್ ಬ್ಲಾಕ್ಗಳ ಉದ್ಯಾನವನಗಳಲ್ಲಿ ಅಂದಾಜು 185 ಮೀ. ಪಾಥ್ವೇ ನಿರ್ಮಾಣ, ಉದ್ಯಾನವನದ ಮುಖ್ಯ ದ್ವಾರದ ಬಳಿ ಡೆಕ್ಸ್ಲಾö್ಯಬ್ ನಿರ್ಮಾಣ ಮಾಡಲಾಗುವುದು ಎಂದರು.
ಗೋಪಾಳ ಬಡಾವಣೆಯ ಡಿ ಮತ್ತು ಇ ಬ್ಲಾಕ್ಗಳ ಉದ್ಯಾನವನ ಅಭಿವೃದ್ದಿಗೆ ರೂ.25 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಉದ್ಯಾನವನದಲ್ಲಿ ಪ್ಲಾಟ್ಫಾರಂ ನಿರ್ಮಾಣದೊಂದಿಗೆ 09 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಫೆನ್ಸಿಂಗ್ ದುರಸ್ತಿ, ಹಾಲಿ ಇರುವ ಪಾಥ್ವೇ ದುರಸ್ತಿ, ಉದ್ಯಾನವನದಲ್ಲಿ 07 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದರು.

ಪಂಪಾ ನಗರದಲ್ಲಿರುವ ಮಲೆನಾಡು ಸೊಸೈಟಿ ಪಕ್ಕದ ಉದ್ಯಾನವನದ ಅಭಿವೃದ್ದಿ ಮತ್ತು ಗಾಡಿಕೊಪ್ಪ ಪೊಲೀಸ್ ಲೇಔಟ್ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಅಳವಡಿಸುವ ರೂ.25 ಲಕ್ಷ ಮೊತ್ತದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಉದ್ಯಾನವನದಲ್ಲಿ ಪ್ಲಾಟ್ಫಾರಂ ನಿರ್ಮಾಣದೊಂದಿಗೆ 8 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಉದ್ಯಾನವನದಲ್ಲಿ ಸುಮಾರು 100 ಮೀ. ಪಾಥ್ ವೇ ನಿರ್ಮಾಣ ಹಾಗೂ 03 ಸಂಖ್ಯೆಯ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಅಭಿಯಂತರರಾದ ಬಸವರಾಜಪ್ಪ, ಗಂಗಾಧರ ಸ್ವಾಮಿ, ಅಧಿಕಾರಿಗಳು, ಹಸಿರೇ ಉಸಿರು ಸಂಘದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಗಂಗಾಧರ್, ಜಿ.ಡಿ.ಮಂಜುನಾಥ್, ಜಿತೇಂದ್ರ ಗೌಡ, ಹಾಲಪ್ಪ, ನಿವಾಸಿಗಳು ಪಾಲ್ಗೊಂಡಿದ್ದರು.