
ಶಿವಮೊಗ್ಗ,ಏ.೦೧:ನಗರದ ಮಧ್ಯ ಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಮೈದಾನದ ವಿವಾದ ಇಂದು ಮತ್ತೆ ಭುಗಿಲೆದ್ದಿದೆ.
ನಿನ್ನೆ ಮುಸ್ಲಿಂ ಸಮುದಾಯದ ರಂಜಾನ್ ಹಬ್ಬದ ಪ್ರಾರ್ಥನೆಗೆ ಎಂದಿನಂತೆ ಅವಕಾಶ ನೀಡಲಾಗಿತ್ತು. ಆದರೆ ಇಂದು ಏಕಾಏಕಿ ಆ ಮೈದಾನಕ್ಕೆ ಹೋಗುವ ಮುಖ್ಯ ದ್ವಾರದಲ್ಲಿ ೧೦ ಅಡಿ ಎತ್ತರದ ಬೇಲಿ ನಿರ್ಮಾಣವಾಗಿತ್ತು. ಇದರಿಂದ ಸುತ್ತಲು ಇರುವ ವಾಣಿಜ್ಯ ಮಳಿಗೆಗಳಿಗೆ ಮತ್ತು ಬ್ಯಾಂಕ್ಗಳಿಗೆ ತೆರಳುವ ಹಾಗೂ ಆ ಮೈದಾನದಲ್ಲಿ ವಾಹನ ನಿಲುಗಡೆ ಮಾಡುವ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಇದರಿಂದ ಆಕ್ರೋಶ ಭರಿತರಾದ ಸಾರ್ವಜನಿಕರು ಬೇಲಿ ತೆರವುಗೊಳಿಸುವಂತೆ ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಕೂಡ ಸ್ಥಳಕ್ಕೆ ಧಾವಿಸಿ ಬಂದು ಇದು ಮಹಾನಗರ ಪಾಲಿಕೆಗೆ ಸೇರಿದ ಜಾಗ. ಮುಸ್ಲಿಂರು ನಿನ್ನೆ ಪ್ರಾರ್ಥನೆ ಮಾಡಿದ್ದಾರೆ. ಹಬ್ಬ ಶಾಂತಿಯುತವಾಗಿ ನಡೆದಿದೆ. ಅವರ ಪ್ರಾರ್ಥನೆಗೆ ನಾವು ಯಾವುದೇ ಅಡ್ಡಿಪಡಿಸಿಲ್ಲ. ಹಿಂದೂ ಮತ್ತು ಮುಸ್ಲಿಂ ಎಲ್ಲರೂ ನಗರದಲ್ಲಿ ಭಾವೈಕೈತೆಯಿಂದ ಇದ್ದಾರೆ. ಆದರೆ ನಿನ್ನೆ ಪ್ರಾರ್ಥನೆ ಮುಗಿದ ಬಳಿಕ ಇಂದು ಬೆಳಿಗ್ಗೆ ಏಕಾಏಕಿ ಬೇಲಿ ಹಾಕಿದ್ದು, ಇದು ಮುಸ್ಲಿಂರ ಏಕಪಕ್ಷೀಯ ತೀರ್ಮಾನವಾಗಿದೆ. ಇದಕ್ಕೆ ಅವರು ಯಾವುದೇ ಅನುಮತಿ ಪಡೆದಿಲ್ಲ. ಪಾಲಿಕೆಯ ಗಮನಕ್ಕೂ ಬಂದಿಲ್ಲ. ಪೊಲೀಸ್ ಇಲಾಖೆಗೂ ತಿಳಿಸಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮತ್ತೆ ಇದೊಂದು ದೊಡ್ಡ ವಿವಾದವಾಗಿ ಪರಿಣಮಿಸುವ ಮೊದಲೇ ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವೇ ತೆರವುಗೊಳಿಸುತ್ತೇವೆ ಎಂದು ಕೆಲವರು ಪಟ್ಟು ಹಿಡಿದು ಸ್ಥಳದಲ್ಲೇ ಧರಣಿ ಕೂತರು. ಹಾಗೂ ಬೇಲಿ ಹಾಕಿದವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಮತ್ತು ಬೇಲಿಗೆ ಅಡ್ಡವಾಗಿ ರೈಲ್ವೆ ಕಂಬಿಗಳನ್ನು ಕೂಡ ಬಳಸಿದ್ದು, ಇದು ಕಾನೂನು ಬಾಹಿರ ಇದರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ. ಬೇಲಿ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೂಡಲೇ ಹೆಚ್ಚಿನ ಪೊಲೀಸ್ ದಳದೊಂದಿಗೆ ಸ್ಥಳಕ್ಕೆ ಬಂದ ಜಿಲ್ಲಾರಕ್ಷಣಾಧಿಕಾರಿಗಳು ಪ್ರತಿಭಟನಾಕಾರರ ಆಹ್ವಾಲನ್ನು ಕೇಳಿ ಸಂಜೆ ೭ ಗಂಟೆಯೊಳಗೆ ಬೇಲಿಯನ್ನು ತೆರವುಗೊಳಿಸುತ್ತೇವೆ. ಸುಮ್ಮನೆ ವಿವಾದ ಮಾಡುವುದು ಬೇಡ. ಶಾಂತವಾಗಿರಿ, ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬೇಕು. ಇದಕ್ಕೆ ಸಮಯ ಬೇಕಾಗುತ್ತದೆ. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ. ಶಿವಮೊಗ್ಗದ ಜನರಿಗೆ ತೊಂದರೆಯಾಗುವುದು ಬೇಡ. ಏನೇ ವಿವಾದ ಇದ್ದರು ನಾಲ್ಕು ಗೋಡೆಯ ಮಧ್ಯೆ ಬಗೆಹರಿಸಿಕೊಳ್ಳೋಣ. ಕೂಡಲೇ ಧರಣಿ ಹಿಂಪಡೆಯಿರಿ. ಏಳು ಗಂಟೆಯೊಳಗೆ ತೆರವುಗೊಳಿಸುವ ಜವಬ್ದಾರಿ ನನ್ನದು ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನಕಾರರು ಧರಣಿ ಹಿಂಪಡೆದರು.

ಸಧ್ಯಕ್ಕೆ ಜಿಲ್ಲಾರಕ್ಷಣಾಧಿಕಾರಿಗಳ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದ್ದು, ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕೂಡ ಇದಕ್ಕೆ ಒಪ್ಪಿದ್ದು, ಸಂಜೆಯವರೆಗೆ ಕಾದುನೋಡುವುದಾಗಿ ಹೇಳಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಬೇಲಿ ಹಾಕಲು ಬಿಡುವುದಿಲ್ಲ. ಇದು ಸಾರ್ವಜನಿಕರಿಗೆ ಪಾರ್ಕಿಂಗ್ಗೆ ಮೀಸಲಾದ ಜಾಗ ಎಂದು ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಹೆಚ್ಪಿ ಪ್ರಮುಖರಾದ ರಮೇಶ್ ಜಾಧವ್, ಸುರೇಶ್ ಬಾಬು, ಬಿಜೆಪಿ ಪ್ರಮುಖರಾದ ಮೋಹನ್ರೆಡ್ಡಿ, ದೀನ್ದಯಾಳ್, ಶಿವಾನಂದ, ಕಿರಣ್, ಹಿಂದೂಪರ ಸಂಘಟನೆಯ ಪ್ರಮುಖರು, ಸ್ಥಳೀಯ ನಾಯಕರು ಉಪಸ್ಥಿತರಿದ್ದರು.