
ಶಿವಮೊಗ್ಗ: ನೀರಾವರಿ ನಿಗಮದಿಂದ ಕಾಲುವೆ ದುರಸ್ತಿ ಆಗದ ಕಾರಣ ಸಾವಿರಾರು ಎಕರೆ ರೈತರ ಬೆಳೆ ನಷ್ಟವಾಗಿದೆ ಎಂದು ಹೊನ್ನಾಳಿ ಮಾಜಿ ಶಾಸಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಅವರು ಇಂದು
ಕರ್ನಾಟಕ ನೀರಾವರಿ ನಿಗಮ ನಿ., ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಕಚೇರಿಗೆ ಭೇಟಿ ನೀಡಿ ಭದ್ರಾ ಕಾಲುವೆಗೆ ಸಂಬಂಧಿಸಿದಂತೆ ಕಾಲುವೆಯಲ್ಲಿ ಹಲವೆಡೆ ಬಿರುಕು ಬಿಟ್ಟಿದ್ದು, ಕೆಲವು ಕಡೆ ಕಾಲುವೆ ಸಂಪೂರ್ಣ ನಾಶವಾಗಿದೆ. ನಾವು ಇಂದು ಸಾವಿರಾರು ರೈತರೊಂದಿಗೆ ಮುತ್ತಿಗೆ ಹಾಕಲು ಮುಂದಾಗಿದ್ದೆವು. ಆದರೆ, ಭದ್ರಾ ಮುಖ್ಯ ಇಂಜಿನಿಯರ್ ನಮಗೆ ಮಂಗಳವಾರದೊಳಗೆ ನೀರು ಬಿಡುವ ಹಾಗೂ ಕಾಲುವೆ ದುರಸ್ತಿಯ ಬಗ್ಗೆ ಭರವಸೆ ಕೊಟ್ಟಿದ್ದರಿಂದ ಮುತ್ತಿಗೆ ಕಾರ್ಯಕ್ರಮ ಮುಂದೂಡಿದ್ದೇವೆ ಎಂದರು.

ಅವರು ಇಲಾಖೆಯ ಅಧೀಕ್ಷಕ ಅಭಿಯಂತರ ರವಿಚಂದ್ರ ಹಾಗೂ ಡಿಸಿಇ ಲೋಹಿತಾಶ್ವ ಅವರೊಂದಿಗೆ ಕಾಲುವೆ ದುರಸ್ತಿಗೆ ಸಂಬಂಧಿಸಿದಂತೆ ಹಾಗೂ ನೀರಾವರಿ ರೈತರಿಗೆ ನೀಡಲು ಇರುವ ತೊಡಕುಗಳ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಅವರು ಸರ್ಕಾರ ಪಾಪರ್ ಎದ್ದಿದೆ. ಗುತ್ತಿಗೆದಾರರಿಗೆ ೫೫೦೦ ಕೋಟಿ ರೂ. ನೀರಾವರಿ ನಿಗಮವೊಂದರಲ್ಲೇ ಬಾಕಿ ಇದೆ. ಇನ್ನೂ ನೀರಾವರಿ ೪ ನಿಗಮಗಳಿವೆ. ಎಲ್ಲೂ ಕೂಡ ಕೆಲಸವಾಗುತ್ತಿಲ್ಲ. ಗುತ್ತಿಗೆದಾರರು ಯಾರೂ ಕೂಡ ಮುಂದೆ ಬರುತ್ತಿಲ್ಲ. ಅತಿವೃಷ್ಠಿ ಸಂದರ್ಭದಲ್ಲಿ ತಮ್ಮ ಕೈಯಿಂದ ಹಣ ಹಾಕಿದ ಗುತ್ತಿಗೆದಾರರಿಗೆ ೮ ತಿಂಗಳಾದರೂ ಕಾಮಗಾರಿ ಮುಗಿದಿದ್ದರೂ ಹಣ ನೀಡಿಲ್ಲ. ಟೆಂಡರ್ ಪ್ರಕ್ರಿಯೆ ಆಗಿದೆ ಎಂದು ಸುಳ್ಳು ಹೇಳಬೇಡಿ. ನಿಮ್ಮಲ್ಲಿ ಹಣವೇ ಇಲ್ಲ. ತಪ್ಪು ಮಾಹಿತಿ ನೀಡಬೇಡಿ.

ಮುಂದಿನ ಮಂಗಳವಾರದೊಳಗೆ ನೀವು ಕೆಲಸ ಮುಗಿಸಿ ನೀರು ಬಿಡದಿದ್ದರೆ ದೊಡ್ಡಮಟ್ಟದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಸಾಸ್ವೆಹಳ್ಳಿಯಲ್ಲಿ ಈಗಾಗಲೇ ಕಳಪೆ ಕಾಮಗಾರಿ ನಡೆಯುತ್ತಿದೆ. ಕಮ್ಮರಘಟ್ಟ, ಕ್ಯಾಸಿನಕೆರೆ, ಕುಳಘಟ್ಟ, ಭಾಗದಲ್ಲಿ ಕೂಡ ಕಾಲುವೆ ಕೂಡ ಸಂಪೂರ್ಣ ಹಾಳಾಗಿದ್ದು, ಹೊನ್ನಾಳಿಗೆ ನೀರೇ ಬರುತ್ತಿಲ್ಲ. ಮೊದಲು ಇದನ್ನು ದುರಸ್ತಿ ಮಾಡಿ ಎಂದು ಎಚ್ಚರಿಸಿದರು.
ಸರ್ಕಾರದ ಬಳಿ ಸಂಬಳ ನೀಡಲು ಹಣವೂ ಇಲ್ಲ. ದುರಸ್ತಿಗೆ ಹಣ ಎಲ್ಲಿಂದ ತರುತ್ತಾರೆ? ರೈತರು ರೊಚ್ಚಿಗೇಳುವ ಮೊದಲು ಸಮಸ್ಯೆ ಬಗೆಹರಿಸಿ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಆ ಭಾಗದ ರೈತರ ಮುಖಂಡರು ಇದ್ದರು.