
ಶಿವಮೊಗ್ಗ: ನಗರದ ಕಮಲಾ ನೆಹರು ಮಹಿಳಾ ಕಾಲೇಜಿಗೆ ಹೊಂದಿಕೊಂಡಿರುವ ಮಹಾನಗರ ಪಾಲಿಕೆಯ ಖಾಲಿ ನಿವೇಶನಕ್ಕೆ ಶುಕ್ರವಾರ ಉಪಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ ಭೇಟಿ ನೀಡಿ ಪರಿಶೀಲಿಸಿದರು.

ನಗರ ಹೃದಯದ ಭಾಗದಲ್ಲಿರುವ ಪಾಲಿಕೆ ನಿವೇಶನವು ತ್ಯಾಜ್ಯ, ಒಡೆದ ಬಾಟಲಿಗಳು,ಕಸ ಕಡ್ಡಿಗಳ ರಾಶಿಯಿಂದ ಶೋಚನೀಯ ಸ್ಥಿತಿಗೆ ತಲುಪಿದ್ದು, ಹೆಣ್ಣು ಮಕ್ಕಳ ಕಾಲೇಜಿಗೆ ಹೊಂದಿಕೆಯಾಗಿರುವುದರಿಂದ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆಯೂ ಅಗಾಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಎಲ್ಲಾ ದೂರುಗಳ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಭೇಟಿ ನೀಡಿದರು. ಸ್ಥಳ ಪರಿಶೀಲನೆಯ ವೇಳೆ ಪ್ಲಾಸ್ಟಿಕ್ ಗಲೀಜುಗಳು, ಮದ್ಯಬಾಟಲಿಗಳ ರಾಶಿಗಳನ್ನು ಕಂಡು ಉಪಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳದಲ್ಲಿ ಹಾಜರಿದ್ದ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿದ ಉಪಲೋಕಾಯುಕ್ತರು, ಜಾಗದ ಸುತ್ತ ತಡೆಗೋಡೆ ನಿರ್ಮಾಣ ಮಾಡುವುದರ ಜೊತೆಗೆ, ಸ್ವಚ್ಛವಾಗಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು ಒಂದು ತಿಂಗಳ ಒಳಗಾಗಿ ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಎಂ.ಆರ್.ಅನಂತದತ್ತ, ಕುಲಸಚಿವ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಪ್ರಾಂಶುಪಾಲ ಡಾ.ಆರ್.ಎಂ.ಜಗದೀಶ್, ಪಿ.ಆರ್.ಓ ಸಿ.ಎಂ.ನೃಪತುಂಗ ಸೇರಿದಂತೆ ಅಧಿಕಾರಿ ವೃಂದ ಉಪಸ್ಥಿತರಿದ್ದರು.

ಉಪಲೋಕಾಯುಕ್ತರು ಭೇಟಿ ನೀಡಿದ ಕೆಲವೇ ನಿಮಿಷಗಳಲ್ಲಿ ಪಾಲಿಕೆಯ ಸಿಬ್ಬಂದಿಗಳು ಜಾಗದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಯಿತು.