
ಶಿವಮೊಗ್ಗ: ಅಂದು ’ಮುಂಗಾರು ಮಳೆ’ ಇಂದು ’ಮನದ ಕಡಲು’. ಇ. ಕೃಷ್ಣಪ್ಪ, ಜಿ. ಗಂಗಾಧರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ’ಮನದ ಕಡಲು’ ಮಾ. ೨೮ರಂದು ರಾಜ್ಯಾದ್ಯಂತ ಸುಮಾರು ೧೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮನದ ಕಡಲು ಚಿತ್ರದ ಕಲ್ಪನೆ ಬಹಳ ವರ್ಷಗಳತನಕ ನನ್ನ ಮನದಲ್ಲಿತ್ತು. ಚಿತ್ರಕ್ಕೆ ಸರಿ ಹೊಂದುವ ಪಾತ್ರಗಳ ಹುಡುಕಾಟದಲ್ಲಿರುವಾಗಲೇ ಈ ಚಿತ್ರದ ನಟ ಸುಮುಖ್ ಪರಿಚಯವಾದರು. ತಕ್ಷಣವೇ ನಿರ್ಮಾಪಕರ ಗಮನಕ್ಕೆ ತಂದೆ. ಅವರು ಒಪ್ಪಿಗೆಯನ್ನೂ ಕೊಟ್ಟರು. ಚಿತ್ರೀಕರಣ ಆರಂಭವಾಯಿತು ಎಂದರು.

ಮಳೆಯ ತವರುಮನೆಯೇ ಕಡಲು. ಆ ಕಡಲಿನ ಮಿಡಿತವನ್ನು ಅಲೆಗಳ ಅಬ್ಬರಗಳನ್ನು ಪ್ರೇಮಕ್ಕೆ ಸಮೀಕರಿಸಿ ಪ್ರೇಮವನ್ನು ಮತ್ತೊಂದು ಬಗೆಯಲ್ಲಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವುದು ಇತ್ತೀಚೆಗೆ ಕಡಿಮೆಯಾಗಿದೆ. ಆದರೆ, ನನಗೆ ನಂಬಿಕೆ ಇದೆ. ನನ್ನ ನಿರ್ದೇಶನದ ಈ ಚಿತ್ರವನ್ನು ಖಂಡಿತ ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಬಂದೇ ನೋಡುತ್ತಾರೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಫೀಲ್ ಬೇರೆಯದೇ ಆಗಿರುತ್ತದೆ ಎಂದರು.

ಈಗ ೧೮ ವರ್ಷಗಳ ಹಿಂದೆ ಮುಂಗಾರು ಮಳೆ ಬಂದಾಗಲೂ ಕೂಡ ಇದೇ ಅನುಭವವಿತ್ತು. ಮನದ ಕಡಲು ಕೂಡ ಮುಂಗಾರು ಮಳೆಗಿಂತ ಹೆಚ್ಚು ಯಶಸ್ವಿಯಾಗುತ್ತದೆ. ಇದೊಂದು ಮೈಲಿಗಲ್ಲಿನ ಚಿತ್ರವಾಗುತ್ತದೆ. ೬ ಹಾಡುಗಳು ಚಿತ್ರದಲ್ಲಿವೆ. ಮೂವರು ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಯಕ ನಟ ಸುಮುಖ, ನಟಿ ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ ಎಂದರು.

ನಟ ಸುಮುಖ್ ಮಾತನಾಡಿ, ವಯಸ್ಸಿನ ಅಂತರವಿಲ್ಲದೇ ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಬಹುದಾದ ಚಿತ್ರ ಇದಾಗಿದೆ. ಸಿನಿಮಾ ಚಿತ್ರಮಂದಿರದಲ್ಲಿ ನೋಡುವುದೇ ಒಂದು ವಿಶೇಷ ಅನುಭವ ತರುತ್ತದೆ. ರಂಗಭೂಮಿ ಹಿನ್ನಲೆಯಿಂದ ಬಂದ ನನಗೆ ಯೋಗರಾಜ್ ಭಟ್ ಅವರಂತಹ ದೊಡ್ಡ ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಟಿ ರಾಶಿಕಾ ಶೆಟ್ಟಿ, ಚಿತ್ರದ ಪ್ರಮೋಟರ್ ಶ್ರೀಧರ್ ಇದ್ದರು.