
ಶಿವಮೊಗ್ಗ: ರಕ್ತದಾನ ಜೀವ ಉಳಿಸುವ ಅತ್ಯಂತ ಮಹತ್ತರ ಕಾರ್ಯ ಆಗಿದ್ದು, ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ದೇಶೀಯ ವಿದ್ಯಾಶಾಲಾ ಸಮಿತಿಯ ಕಾರ್ಯದರ್ಶಿ ಎಸ್.ರಾಜಶೇಖರ್ ಅಭಿಪ್ರಾಯಪಟ್ಟರು.
ನಟ ಪುನೀತ್ ರಾಜ್ ಕುಮಾರ್ ಜನ್ಮದಿನದ ಸ್ಮರಣಾರ್ಥ ನಗರದ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಯುವ ರೆಡ್ ಕ್ರಾಸ್ ಘಟಕದಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಸಹಕಾರಿಯಾಗುತ್ತದೆ. ಹೊಸ ರಕ್ತ ಚಲನೆಯಿಂದ ಉತ್ತಮ ಆರೋಗ್ಯ ನಮ್ಮದಾಗುತ್ತಿದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ. ಅನೇಕ ಕಾಯಿಲೆಗಳು ಬರದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತವನ್ನು ಮನುಷ್ಯನ ದಾನದಿಂದ ಮಾತ್ರ ಪಡೆಯಬಹುದು. ರಕ್ತದ ಲಭ್ಯತೆ ಕಡಿಮೆ ಇರುವುದರಿಂದ ದಾನಿಗಳು ರಕ್ತದಾನ ಮಾಡಲು ಮುಂದಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ಇರುವವರಿಗೆ ನೆರವಾಗುತ್ತದೆ ಎಂದು ಹೇಳಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ, ಮೆಗ್ಗಾನ್ ಬೋಧನಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ, ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ “ರಕ್ತದಾನ ಮಾಡಿ ಪುನೀತರಾಗಿ” ಘೋಷವಾಕ್ಯದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ದಿನೇಶ್, ದೇಶೀಯ ವಿದ್ಯಾಶಾಲಾ ಸಮಿತಿಯ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್,

ಮೆಗ್ಗಾನ್ ಬೋಧನಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ ವೈದ್ಯಾಧಿಕಾರಿ ಡಾ. ಗೀತಾಲಕ್ಷ್ಮೀ.ಯು, ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದ ಡಾ. ಕಂಟೀಕರ್, ನವೀನ್, ಗಿರೀಶ್, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಯುವ ರೆಡ್ ಕ್ರಾಸ್ ಘಟಕ ಸಂಯೋಜಕ ಡಾ. ಶ್ರೀನಿವಾಸ್ ಲಮಾಣಿ ಉಪಸ್ಥಿತರಿದ್ದರು.