ಶಿವಮೊಗ್ಗ:
ಇಲ್ಲಿನ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಸುನೀತಾ ಅಣ್ಣಪ್ಪ ಹಾಗೂ ಉಪ ಮೇಯರ್ ಆಗಿ ಶಂಕರ್ ಗನ್ನಿ ಅಧಿಕೃತವಾಗಿ ಇಂದು ಮದ್ಯಾಹ್ನ ಆಯ್ಕೆಯಾಗಿದ್ದಾರೆ.
ಪಾಲಿಕೆ ಸಭಾಂಗಣದಲ್ಲಿ ಇಂದು ಮಧ್ಯಾಹ್ನ ನಡೆದ ಅಯ್ಕೆ ಪ್ರಕ್ರಿಯೆಯಲ್ಲಿ ನಿರೀಕ್ಷೆಯಂತೆ ಸುನೀತಾ ಅಣ್ಣಪ್ಪ ಹಾಗೂ ಶಂಕರ್ ಗನ್ನಿ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತರು ಘೋಷಣೆ ಮಾಡಿದರು.
ಮೇಯರ್ ಅಭ್ಯರ್ಥಿಯಾಗಿದ್ದ ಸುನೀತಾ ಅಣ್ಣಪ್ಪ ಅವರಿಗೆ 25 ಮತಗಳು ದೊರೆತರೆ, ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ೞನ ರೇಖಾ ರಂಗನಾಥ್ ಅವರು 11 ಮತಗಳನ್ನು ಪಡೆದಿದ್ದಾರೆ.
ಇನ್ನು, ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ಶಂಕರ್ ಗನ್ನಿ ಅವರಿಗೆ 24 ಮತಗಳು ದೊರೆತಿದ್ದರೆ, ಇವರ ಪ್ರತಿಸ್ಪರ್ಧಿ ಆರ್.ಸಿ. ನಾಯ್ಕ ಅವರಿಗೆ 11 ಮತಗಳು ದೊರೆತಿವೆ.
ಸುನೀತಾ ಅಣ್ಣಪ್ಪ ಬಗ್ಗೆ
ಡಿಪ್ಲೊಮಾ ಇಂಜಿನೀಯರಿಂಗ್, ಎಂಕಾಂ ಪದವೀಧರೆಯಾಗಿದ್ದಾರೆ. 29ನೆಯ ವಾರ್ಡ್ನಿಂದ ಸತತವಾಗಿ ಮೂರು ಬಾರಿ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವ ಸುನೀತಾ ಅಣ್ಣಪ್ಪ , ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ, ಬಿಜೆಪಿ ರಾಜ್ಯ ಮೀನುಗಾರರ ಪ್ರಕೋಷ್ಠದ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.
ಸುನೀತಾ ಅವರು, ಶಿವಮೊಗ್ಗ ಜಿಲ್ಲಾ ಮೊಗವೀರ ಸಮಾಜದ ಅಧ್ಯಕ್ಷರು ಹಾಗೂ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕರೂ ಆಗಿರುವ ಕೆ.ವಿ. ಅಣ್ಣಪ್ಪ ಅವರ ಪತ್ನಿ.