
ಶಿವಮೊಗ್ಗ: ಶಿವಮೊಗ್ಗದಲ್ಲಿ ಹೋಳಿ ಹಬ್ಬಕ್ಕೆ ಭರದ ಸಿದ್ಧತೆ ನಡೆದಿದ್ದು, ಶನಿವಾರ ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ಸಂಭ್ರಮದ ಹೋಳಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಗರದ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಉತ್ಸವಕ್ಕೆ ಭರ್ಜರಿ ಸಿದ್ಧತೆ ಮಾಡಲಾಗುತ್ತಿದ್ದು, ರೇನ್ ಡ್ಯಾನ್ಸ್ ಗೆ ಸಿದ್ಧತೆ ಮಾಡಲಾಗಿದೆ. ನಗರದ ಸಹಸ್ರಾರು ಯುವಕರು, ಯುವತಿಯರು ಪ್ರತಿವ ವರ್ಷದಂತೆ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ಗಾಂಧಿ ಬಜಾರ್ ನ ಬಸವೇಶ್ವರ ದೇವಸ್ಥಾನ ಹಾಗೂ ತುಳಜಾ ಭವಾನಿ ದೇವಸ್ಥಾನ, ಕುಂಬಾರ ಬೀದಿ ಮತ್ತು ಬಿಬಿ ರಸ್ತೆಯಲ್ಲಿ ಕಾಮಣ್ಣನ ಪ್ರತಿಮೆ ಸ್ಥಾಪಿಸಿ ಪೂಜಿಸಲಾಗುತ್ತಿದೆ.

ಶನಿವಾರದಂದು ಈ ಎಲ್ಲಾ ಮೂರ್ತಿಗಳ ಕಾಮದಹನ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೂ ಮುನ್ನ ವಿಸರ್ಜನಾ ಪೂರ್ವ ಮೆರವಣಿಗೆಯನ್ನೂ ಹಮ್ಮಿಕೊಳ್ಳಲಾಗಿದ್ದು, ಕುಂಬಾರ ಬೀದಿಯಲ್ಲಿ ಪ್ರತಿ ವರ್ಷದಂತೆ ರತಿ ಮನ್ಮಥರನ್ನು ಪ್ರತಿಮೆ ಸ್ಥಾಪನೆ ಮಾಡಿದ್ದು, ಮನ್ಮಥನ ದಹನ ಮಾತ್ರ ನಡೆಯಲಿದೆ.

ವಿವಾಹ ಬಂಧನ ಆಗದೇ ಇರುವವರಿಗೆ ಮತ್ತು ಬಹುಕಾಲ ಮಕ್ಕಳಾಗದ ದಂಪತಿಗಳಿಗೆ ಕಾಮಣ್ಣನ ಪೂಜೆ ಮಾಡುವುದರಿಂದ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನಲೆಯಲ್ಲಿ ಕಾಮಣ್ಣನಿಗೆ ವಿಶೇಷ ಪೂಜೆ ರತಿ ದೇವಿಗೆ ಸೀರೆಯ ಹರಕೆಯನ್ನು ಒಪ್ಪಿಸುವ ಪ್ರತೀತಿ ಇದೆ.
ರಾಸಾಯನಿಕ ಬಣ್ಣಗಳನ್ನು ಬಳಸದೇ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಿ ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಗಾಂಧಿ ಬಜಾರ್, ದುರ್ಗಿಗುಡಿ ಮತತು ಗೋಪಿ ವೃತ್ತದಲ್ಲಿ ಮಡಕೆ ಒಡೆಯುವ ಕರ್ಯಕ್ರಮಗಳನ್ನು ಕೆಲವು ಯುವ ಸಂಘಟನೆಗಳು ಆಯೋಜಿಸಿವೆ.