
ಶಿವಮೊಗ್ಗ: ವಸತಿ ಯೋಜನೆಯಡಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಪಿಡಿಓ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಸೋಗಾನೆ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜ್ಯೋತಿನಗರ, ವಿನಾಯಕನಗರ, ಸಿದ್ದರಗುಡಿ ಗ್ರಾಮಗಳು ಸಂಪೂರ್ಣ ಸರ್ಕಾರಿ ಪ್ರದೇಶದ ಗ್ರಾಮಗಳಾಗಿವೆ. ಉಳಿದಂತೆ ಹಾರೇಕಟ್ಟೆ, ಸೋಗಾನೆ, ಓತಿಘಟ್ಟ ಗ್ರಾಮಗಳು ಬಹುತೇಕ ಸರ್ಕಾರಿ ಜಾಗದಲ್ಲಿವೆ. ಇಲ್ಲಿನ ಜನರು ಹತ್ತಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ.

ಈಗಾಗಲೇ ಅನೇಕರಿಗೆ ಸರ್ಕಾರದಿಂದ 2017 ರಲ್ಲಿ ಹಕ್ಕುಪತ್ರವನ್ನು ಸಹ ನೀಡಲಾಗಿದೆ. ಇದೀಗ ಆ ಮನೆಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಉಳಿದ ಮನೆಯ ಪಕ್ಕದಲ್ಲೇ ಇರುವ ಅಲ್ಪ-ಸ್ವಲ್ಪ ಜಾಗಗಳಲ್ಲಿ ಬಡವರು, ನಿರ್ಗತಿಕರಿಗೆ ವಸತಿಯೋಜನೆಯಡಿ ಮನೆಕಟ್ಟಿಕೊಳ್ಳಲು ಅವಕಾಶ ನೀಡಿ ಅವರ ಜೀವನಕ್ಕೆ ಅನುಕೂಲ ಮಾಡಿಕೊಡುವ ಬದಲಾಗಿ ಇದು ಸರ್ಕಾರಿ ಜಾಗ ಮನೆಕಟ್ಟಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ ಎಂದು ಅನಿಲ್ ಆರೋಪಿಸಿದರು.

ವಸತಿ ಯೋಜನೆಯಡಿ ಮನೆ ಪಡೆಯಬೇಕಾದರೇ ಜಾಗದ ಹಕ್ಕುಪತ್ರವಾಗಲಿ, ಪಂಚಾಯಿತಿ ಖಾತೆಯಾಗಲಿ ಒದಗಿಸುವಂತೆ ಯಾವುದೇ ಆದೇಶ ಇರುವುದಿಲ್ಲ. ಆದರೆ ಪಿಡಿಒ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹಕ್ಕುಪತ್ರ ಇರುವ ಜಾಗಕ್ಕಷ್ಟೇ ಮನೆ ನೀಡುತ್ತೇವೆ ಎನ್ನುತ್ತಿದ್ದು, ಹಕ್ಕುಪತ್ರ ಇಲ್ಲದ ಜನರು ಇದರಿಂದ ತೊಂದರೆ ಎದುರಿಸುವಂತಾಗಿದೆ. ಇದರಿಂದ ಸರ್ಕಾರದಿಂದ ಮನೆ ಪಡೆಯುವುದು ಗಗನಕುಸುಮ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೋಗಾನೆ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಜನರು ಈಗಾಗಲೇ ತಮ್ಮ ಸರ್ವಸ್ವವೇ ಆಗಿದ್ದ ಜಮೀನುಗಳನ್ನು ವಿಮಾನ ನಿಲ್ದಾಣಕ್ಕಾಗಿ ತ್ಯಾಗ ಮಾಡಿದ್ದಾರೆ. ಇದೀಗ ಉಳಿದ ಅಲ್ಪ ಸ್ವಲ್ಪ ಜಾಗದಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ನೀಡದೇ ವಂಚಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅನಿಲ್ ಪ್ರಶ್ನಿಸಿದರು.

ಪ್ರತಿಭಟನೆಗೆ ಬೆಂಬಲ
ಗ್ರಾ.ಪಂ ಸದಸ್ಯ ಪ್ರತಿಭಟನೆ ನಡೆಸುತ್ತಿರುವ ವಿಷಯವನ್ನು ತಿಳಿದ ನೊಂದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಲ್ಲದೇ ಮುಂದಿನ ದಿನಗಳಲ್ಲಿ ನಿಮ್ಮ ಹೋರಾಟಕ್ಕೆ ಕೈ ಜೋಡಿಸುವುದಾಗಿ ನೈತಿಕ ಸ್ಥೈರ್ಯ ತುಂಬುತ್ತಿದ್ದ ಸನ್ನಿವೇಶ ಕಂಡು ಬಂತು.