
ಶಿವಮೊಗ್ಗ: ಎ.ಸಿ.ಕಚೇರಿಯಿಂದ ರೈತರಿಗೆ ನೀಡುತ್ತಿರುವ ನೋಟಿಸನ್ನು ಹಿಂಪಡೆಯಲು ಒತ್ತಾಯಿಸಿ ತುಂಗಾ-ಭದ್ರಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮುತ್ತಿಗೆ ಹಾಕಿ ನೋಟಿಸು ಹಿಂಪಡೆಯುವಂತೆ ಸಂತ್ರಸ್ತರು ಆಗ್ರಹಿಸಿದರು.

ಶಿವಮೊಗ್ಗ ತಾಲೂಕು ನಿದಿಗೆ ಹೋಬಳಿ ಹಾಲಲಕ್ಕವಳ್ಳಿ ಗ್ರಾಮ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ ಗ್ರಾಮಗಳು 1951ರ ತುಂಗಾ ಹಾಗೂ 1956ರ ಭದ್ರಾ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿನ ಮುಳುಗಡೆ ಸಂತ್ರಸ್ತರಿಗೆ ಮತ್ತು ಭೂ ಹೀನರಿಗೆ ಪುನರ್ ವಸತಿ ಗ್ರಾಮ ಎಂದು ನಿರ್ಮಿಸಲಾಗಿದೆ. ಜಿಲ್ಲೆಯ ಹಳೆಯ ಆಣೆಕಟ್ಟು ಇದಾಗಿದ್ದು ಇಲ್ಲಿ ಸಂಗ್ರಹವದ ನೀರು ದೂರದ ಆಂಧ್ರಪ್ರದೇಶದವರೆಗೂ ಹರಿಯುತ್ತಿದೆ. ಲಕ್ಷಾಂತರ ಎಕರೆ ಕೃಷಿ ಜಮೀನಿಗೆ ಹಾಗೂ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಸರಬರಾಜಾಗುತ್ತಿದ್ದು ಇಲ್ಲೇ ಆಣೆಕಟ್ಟೆಯ ಹಿನ್ನೀರಿನಲ್ಲಿ ಸಂತ್ರಸ್ತರಾದ ಜನರ ಹಿತಾಸಕ್ತಿಯನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತುಂಗಾ ಆಣೆಕಟ್ಟು ಯೋಜನಾ ವರದಿಯಲ್ಲಿ ಹಾಲಲಕ್ಕವಳ್ಳಿಯ ಸರ್ವೆ ನಂ.18, 19 ಹಾಗೂ 20 ಮುಳುಗಡೆ ಸಂತ್ರಸ್ತರಿಗೆ ಮತ್ತು ಭೂ ಹೀನರಿಗೆ ಭೂ ಮಂಜೂರಾತಿ, ಗ್ರಾಮ ನಿರ್ಮಾಣ, ಶಾಲೆ, ದೇವಸ್ಥಾನ ಮತ್ತು ಪ್ರಾಥಮಿಕ ಚಿಕಿತ್ಸಾ ಕೇಂದ್ರ ನಿರ್ಮಿಸಲು ಆಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಹಾಲಲಕ್ಕವಳ್ಳಿಯಲ್ಲಿ ಸುಮಾರು 690 ಎಕರೆ ತರಿ ಮತ್ತು ಖುಷ್ಕಿ ಜಮೀನನ್ನು ಕಂದಾಯ ಇಲಾಖೆಯಿಂದ ಮಂಜೂರಾತಿ ನೀಡಲಾಗಿದೆ.

ತುಂಗಾ ಬಲದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರದೇಶವನ್ನು ನೀರಾವರಿಗೆ 1951ರಿಂದಲೂ ಮಂಜೂರಾತಿ ಆಗಿದ್ದು ಕೆಲವು ಜಮೀನುಗಳಿಗೆ ಪಕ್ಕಾಪೋಡು, ದುರಸ್ತಿ ಆಗಿದೆ. 1980ರ ಹೊಸ ಅರಣ್ಯ ಕಾಯ್ದೆ ಜರಿಗಿಂತಲೂ ಮುಂಚಿತವಾಗಿ ಈ ಜಮೀನುಗಳು ಮಂಜೂರಾಗಿದ್ದು ಈಗ ಅರಣ್ಯ ಇಲಾಖೆಯವರು ಅರ್ಧ ಎಕರೆಯಿಂದ ಮೂರು ಎಕರೆ ಜಮೀನು ಹೊಂದಿದವರಿಗೂ, ಪಕ್ಕಾ ಪೋಡು ಆದವರಿಗೂ ಎ.ಸಿ.ಕೋಟ್ ್ನಲ್ಲಿ ಮೂಲ ಮಂಜೂರಾತಿ ರದ್ದುಗೊಳಿಸಲು ವ್ಯಾಜ್ಯ ಹೂಡಿರಿತ್ತಾರೆ.

ಕರ್ನಾಟಕ ಸರ್ಕಾರದ ಅರಣ್ಯ ಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಸಿಸಿಎಫ್ ಕಚೇರಿಗೆ ಡಿನೋಟಿಫಿಕೇಷನ್ ಪ್ರಸ್ತಾವನೆಗೆ ಸಲ್ಲಿಸಿದ ಅರ್ಜಿ ಪರಿಶೀಲನಾ ಹಂತದಲ್ಲಿದ್ದು ಉದ್ಧೇಶಪೂರ್ವಕವಾಗಿ ನಿರ್ಲಕ್ಷ ಮಾಡಿದ್ದು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 60-70 ವರ್ಷಗಳಿಂದ ಕಂದಾಯ ಇಲಾಖೆಯಿಂದಲೇ ಮಂಜೂರಾತಿ ನೀಡಿದ ಜಮೀನು ಸಾಗುವಳಿ ಪತ್ರ, ಮನೆ ಹಕ್ಕು ಪತ್ರ, ಪುನರ್ವಸತಿ ಸೌಕರ್ಯ ಮುಂತಾದವುಗಳನ್ನು ಸಮರ್ಥಿಸಿಕೊಳ್ಳಲು ಕಂದಾಯ ಇಲಾಖೆಯೂ ಮುಂದೆ ಬರದ ಕಾರಣ ಈ ಚಳುವಳಿಯನ್ನು ಹಮ್ಮಿಕೊಂಡಿದ್ದು, ಕೂಡಲೇ ಸರ್ಕಾರ ಸ್ಪಂಧಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಪ್ರತಿಭಟನಕಾರರನ್ನು ಉದ್ದೇಶಿಸಿ ಕಳೆದ ಮೂರು ತಿಂಗಳ ಹಿಂದೆಯೇ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ನೋಟೀಸ್ ನೀಡದಂತೆ ಅರಣ್ಯ ಇಲಾಖೆಗೆ ಕೂಡ ಸೂಚಿಸಲಾಗಿದೆ. ಆದರೆ ಸುಪ್ರಿಂ ಕೋರ್ಟ್ ಆದೇಶ ಮೇರೆಗೆ ಅರಣ್ಯ ಇಲಾಖಾ ಅಧಿಕಾರಿಗಳು ನೋಟೀಸ್ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನ ಪಡುತ್ತಿದ್ದು, ಅಲ್ಲಿಯವರೆಗೆ ತಾಳ್ಮೆಯಿಂದ ಇರುವಂತೆ ಸೂಚಿಸಿದ ಅವರು, ಈ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲೂ ಕೂಡ ಪ್ರಯತ್ನಗಳು ಮುಂದುವರೆದಿದೆ. ವಿಧಾನಸಭೆಯಲ್ಲೂ ಕೂಡ ಚರ್ಚೆಯಾಗಿದೆ. ಪ್ರತಿಭಟನೆ ವಾಪಾಸ್ಸು ಪಡೆಯುವಂತೆ ಎಷ್ಟೆ ಮನವಿ ಮಾಡಿದರೂ ಪ್ರತಿಭಟನಕಾರರು ಒಪ್ಪದೇ ಧರಣಿ ಕೂತರು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಬಂದು ಸಮಜಾಯಿಸಿ ನೀಡಬೇಕು. ಅಲ್ಲಿಯವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕೂತರು. ಉಪವಿಭಾಗಾಧಿಕಾರಿ ಸ್ಥಳಕ್ಕೆ ಬಂದು ರೈತರಿಗೆ ಸಮಧಾನ ಪಡಿಸಿ ವಸ್ತುಸ್ಥಿತಿಯನ್ನು ವಿವರಿಸಿದರು. ಇದಕ್ಕೂ ಮುನ್ನ ಬಿಗಿ ಪೊಲೀಸ್ ಬಂಧೋಬಸ್ತ್ನ್ನು ಬೇದಿಸಿ ಪ್ಯಾರಿಕೇಟ್ ತಳ್ಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ತಿ.ನಾ.ಶ್ರೀನಿವಾಸ್, ಹರೀಶ್, ಶ್ರೀಕಾಂತ್, ಜಗದೀಶ್, ಜಯವೇಲು, ಮುನಿಸ್ವಾಮಿ, ಮಂಜುನಾಥ್, ಚೆಲುವರಾಯ, ಮಂಜುಳ, ಚೆಲುವಮ್ಮ ಮೊದಲಾದವರು ಇದ್ದರು.