ಸಾಗರ : ತಾಲ್ಲೂಕಿನ ಆನಂದಪುರಂನಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿದ ಆರೋಪಿ ೧೨ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದ್ದು, ಬಂಧಿತನ ವಿರುದ್ದ ವಿವಿಧ ಟಾಣೆಯಲ್ಲಿ ೧೨ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಆನಂದಪುರಂನ ವಿವಿಧ ಭಾಗಗಳಲ್ಲಿಮನೆ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆನಂದಪುರಂ ಉಪ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೊಸನಗರ ತಾಲ್ಲೂಕಿನ ಬಸವಪುರದ ಅಶೋಕ್ ಕೆ. ಹಾಗೂ ಶಿವಮೊಗ್ಗ ತಾಲ್ಲೂಕಿನ ಹಾರ್ನಳ್ಳಿ ಗ್ರಾಮದ ಚಂದ್ರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಅವರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.


ಬಂಧಿತರು ಆನಂದಪುರಂ ಠಾಣಾ ವ್ಯಾಪ್ತಿಯಲ್ಲಿ ೪, ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ೫, ಹೊಸನಗರ, ಮಾಳೂರು, ಸಾಗರ ಪೇಟೆ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು ೧೨ ಮನೆ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ ೩೮೭ ಗ್ರಾಂ ಚಿನ್ನ, ೩೮೪ ಗ್ರಾಂ ಬೆಳ್ಳಿ, ಕೃತ್ಯಕ್ಕೆ ಉಪಯೋಗಿಸಿದ ೨ ಬೈಕ್ ಸಮೇತ ಒಟ್ಟು ೩೨೨೩೬೮೮ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಸಂತೋಷ್ ಕುಮಾರ್ ಶೆಟ್ಟಿ, ಪಿಎಸ್ಐ ಯುವರಾಜ ಕೆ., ಸಿಬ್ಬಂದಿಗಳಾದ ಅಶೋಕ್, ಪರಶುರಾಮ್, ಉಮೇಶ್ ಲಮಾಣಿ, ಸಂತೋಷಕುಮಾರ್, ನೂತನ್, ನಿರಂಜನ್, ಸುಬ್ರಹ್ಮಣ್ಯ ಎಸ್., ಭರತ್ ಕುಮಾರ್, ವಿಜಯಕುಮಾರ್, ಇಂದ್ರೇಶ್, ನರಸಿಂಹಸ್ವಾಮಿ, ಸತೀಶ್ ಇನ್ನಿತರರು ಪಾಲ್ಗೊಂಡಿದ್ದರು