ಶಿವಮೊಗ್ಗ: ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಓರ್ವ ಷ್ಠಾವಂತ, ಪ್ರಾಮಾಣಿಕ ವ್ಯಕ್ತಿಯಾಗಿದ್ದು ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ನೀಟ್ ಪರೀಕ್ಷಾ ವಿವಾದದ ಆರೋಪ ಇವರ ಮೇಲೆ ಬಂದು ರಾಜೀನಾಮೆ ಕೊಡಬೇಕಾಯಿತು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತ ಪಡಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಾಮಾಣಿಕ ವ್ಯಕ್ತಿಯ ಸೇವೆ ದೇಶಕ್ಕೆ ಬೇಕೇ ಬೇಕು. ಈ ರೀತಿಯ ಶಿಕ್ಷೆ ಅವರಿಗೆ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಪ್ರಧಾನ್ ಸಾಕಷ್ಟು ಸುಧಾರಣೆ ತಂದಿದ್ದರು. ನಾನು ಬಿಜೆಪಿ ರಾಜ್ಯಾಧ್ಯಕ್ಷನಿದ್ದ ಅವಧಿಯಲ್ಲಿ ಪ್ರಧಾನ್ ಅವರು ರಾಜ್ಯದ ಉಸ್ತುವಾರಿಯಾಗಿದ್ದರು. ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ, ಪಕ್ಷದ ಸಂಘಟನೆಗೆ ಸಹಕರಿಸಿದ್ದರು. ಈಗ ರಾಜೀನಾಮೆ ಸಲ್ಲಿಸಿದರೂ ಅವರು ಪಕ್ಷದ ಹಾಗೂ ರಾಷ್ಟ್ರಮಟ್ಟದಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಹೋಗಲಿದ್ದಾರೆ ಎಂದು ಆಶೀಸಿದರು.
ಕಾಕ್ರೋಚ್ ಜನತಾ ಪಕ್ಷದ ಕಾರ್ಯಕರ್ತರು ಜಂತರ್-ಮಂತರ್ನಲ್ಲಿ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳ ಪರ ಚಳವಳಿ ಆಗಿರಲಿಲ್ಲ. ಇದೊಂದು ಧಂಗೆಯಾಗಿತ್ತು. ಪಾಕಿಸ್ತಾನ, ಬಾಂಗ್ಲಾ ಮತ್ತಿತರರ ದೇಶ-ವಿದೇಶಗಳಿಂದ ಜನರು ಬಂದಿದ್ದರು. ಹಣವೂ ಬಂದಿತ್ತು. ಕಾಂಗ್ರೆಸ್ ವಿರೋಧ ಪಕ್ಷವಾಗಿ ನೀಟ್ ಚಳುವಳಿಗೆ ಬೆಂಬಲ ನೀಡಿದ್ದು ತಪ್ಪಲ್ಲ, ಆದರೆ ಚಳುವಳಿಗಾರರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿದ್ದು ಸರಿಯಲ್ಲ. ಧರ್ಮಭೂಮಿ ಸಂವಿಧಾನಕ್ಕೆ ಬೆಲೆಕೊಡುವ ಭೂಮಿ ಭಾರತ ಆಗಿದ್ದು, ಧರ್ಮದ್ರೋಹಿಗಳು, ದೇಶದ್ರೋಹಿಗಳು ಏನೇ ಹುನ್ನಾರ ನಡೆಸಿದರೂ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ. ವರದಿ ಬಂದ ನಂತರ ವಾಸ್ತವಾಂಶ ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಸಮಾರಂಭವೊಂದರಲ್ಲಿ ತಾವು ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಈ ರೀತಿ ಬಹಳ ಬಾರಿ ಹೇಳಿದ್ದಾರೆ. ಇವತ್ತೂ ಹೇಳಿದ್ದಾರೆ. ಈ ಹಿಂದೆ ಅವರ ಮಗನೂ ತಮ್ಮ ತಂದೆಯೇ ಐದುವರ್ಷ ಮುಖ್ಯಮಂತ್ರಯಾಗಿರುತ್ತಾರೆ. ೨೦೨೮ರ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಮುಂದೆಯೂ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದ್ದರು. ಆದರೆ ಈಗ ಸಿದ್ದರಾಮಯ್ಯ ನೀಡಿರುವ ಹೇಳಿಕೆಯು ನಂಬಲು ಅರ್ಹವಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಇಂದು ದೆಹಲಿಗೆ ತೆರಳಿ ರಾಜ್ಯದ ಎಂಪಿಗಳ ಜೊತೆ ರಾಜ್ಯದ ಬರದ ಬಗ್ಗೆ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಸರ್ವೇ ಕೈಗೊಳ್ಳದೆ ಯಾವ ಅಂಕಿ-ಅಂಶವೂ ಇಲ್ಲದೆ ಎಂಪಿಗಳ ಜೊತೆ ಸಭೆ ನಡೆಸುವುದಾದರೂ ಏಕೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಸರ್ವೇಮಾಡುವ ಅಧಿಕಾರಿಗಳೆಲ್ಲಾ ಎಸ್ಐಆರ್ನಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದಲ್ಲಿ ಏನೇ ಆರ್ಥಿಕ ಸಂಕಷ್ಟ ಎದುರಾದರೂ ಕೇಂದ್ರದತ್ತ ಬೊಟ್ಟುಮಾಡಿ ತೋರಿಸಲಾಗುತ್ತಿದೆ ಎಂದು ಟೀಕಾಪ್ರಹಾರ ಮಾಡಿದರು.
ರಾಜ್ಯದಲ್ಲಿ ಪೂರ್ಣಪ್ರಮಾಣದ ಮಂತ್ರಿಮಂಡಲ ಇಲ್ಲದೇ ಇರುವುದರಿಂದ ಜಿಲ್ಲೆಗಳಲ್ಲಿ ಉಸ್ತುವಾರಿಗಳಿಲ್ಲ. ಮುಖ್ಯಮಂತ್ರಿಗಳು ಕೇವಲ ಉನ್ನತಾಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ಮಾತ್ರ ನೀಡುತ್ತಿದ್ದಾರೆ. ಬರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಿಎಂ ಇರೋದು ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದಕ್ಕೆ ಮಾತ್ರವಾ… ಎಂದು ಗೇಲಿ ಮಾಡಿದರು.

೧೩೬ ಕಾಂಗ್ರೆಸ್ ಸದಸ್ಯರನ್ನು ಹೊಂದಿದ ಸರ್ಕಾರವಾಗಿದ್ದರೂ ಇದೊಂದು ಬೇಜವಾಬ್ದಾರಿ ಸರ್ಕಾರ. ಸಧ್ಯದಲ್ಲಿ ಸಂಪುಟ ವಿಸ್ತರಣೆಯಾಗದಿದ್ದರೆ ಈಗಾಗಲೇ ಮುಂದೂಡಿರುವ ಮಲೆಗಾಲದ ಅಧಿವೇಶನವನ್ನು ಮತ್ತೆ ಮುಂದಕ್ಕೆ ಹಾಕುತ್ತಾರಾ ಎಂದು ಕಟುವಾಗಿ ಪ್ರಶ್ನಿಸಿದರು.