ಶಿವಮೊಗ್ಗ : ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಹಾಗೂ ಶಿವಸಂಕಲ್ಪ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜುಲೈ೩೧ರಂದು ಸಂಜೆ ೬ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಗಾನ ಕೋಗಿಲೆ ಎಸ್.ಜಾನಕಿ ಸಂಸ್ಮರಣೆಯಲ್ಲಿ ‘ನಾದ ದೇವತೆಯ ನೆನಪಿನಲಿ…’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಗಾಯನ, ವಾದ್ಯ ಕಲಾವಿದರಿಂದ ಎಸ್.ಜಾನಕಿ ಹಾಡಿರುವ ಗೀತೆಗಳ ಪ್ರಸ್ತುತಿ ನಡೆಯಲಿದೆ ಎಂದು ಶ್ರೀಗಂಧ ಸಂಸ್ಥೆಯ ಪ್ರಮುಖ ಕೆ.ಈ.ಕಾಂತೇಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್.ಜಾನಕಿ ಅವರನ್ನು ಕೊನೆಯತನಕ ನೋಡಿಕೊಂಡಿದ್ದ ನವೀನ್ ಅವರಿಗೆ ಗೌರವ ಸಮರ್ಪಣೆ ಮಾಡುವುದರ ಜೊತೆಗೆ ರಾಜ್ಯಪ್ರಶಸ್ತಿ ಪುರಸ್ಕೃತ ಪಂಡಿತ್ ಆರ್.ಬಿ.ಸಂಗಮೇಶ್ವರ ಗವಾಯಿ, ಪಂಡಿತ್ ಪುಟ್ಟರಾಜ ಗವಾಯಿ ಶಿಷ್ಯರಾದ ಪಂಡಿತ್ ಹುಮಾಯೂನ್ ಹರ್ಲಾಪುರ್ ಜೊತೆಯಲ್ಲಿ ಗಾಯಕರಾದ ವಿನಯ್ ಶಿವಮೊಗ್ಗ, ಭಾರತೀ ಚಂದ್ರಶೇಖರ್, ಶುಭಾ ರಾಘವೇಂದ್ರ, ನಾಗರತ್ನ ಚಂದ್ರಶೇಖರಯ್ಯ, ಸುಮಾ ರವೀಂದ್ರ ಹೆಗಡೆ ಇವರನ್ನು ಸನ್ಮಾನಿಸಲಾಗುವುದು ಎಂದರು.
ಕಲಾವಿದರಾದ ಮಂಗಳಾರವಿ, ಸುರೇಖಾ ಹೆಗಡೆ, ಸಂಜನಾಕುಮಾರ್, ಪೃಥ್ವಿಗೌಡ, ಸಾಕೇತ್ ಶಾಸ್ತ್ರೀ ಮೊದಲಾದವರು ವಿನಯ್ ಶಿವಮೊಗ್ಗರವರ ಪರಿಕಲ್ಪನೆ-ನಿರೂಪಣೆಯಲ್ಲಿ ಗಾಯನ ಪ್ರಸ್ತುತಪಡಿಸಲಿದ್ದಾರೆ ಎಂದರು.

ಸಮಾರಂಭದ ವೇದಿಕೆಯ ಸಾನಿಧ್ಯವನ್ನು ಜಗಳೂರು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ಕೇದಾರ ಪಂಚಪೀಠದ ನಿಯೋಜಿತ ಪೀಠಾಧಿಪತಿ ಡಾ.ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಉಪಮುಖ್ಯಮಂತ್ರಿ, ಶ್ರೀಗಂಧದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ವಹಿಸುವರು. ಶ್ರೀಗಂಧದ ಕೋಶಾಧ್ಯಕ್ಷ ಕೆ.ಈ.ಕಾಂತೇಶ್, ಶಿವಸಂಕಲ್ಪದ ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರೀ, ಪ್ರಮುಖರಾದ ಎನ್.ಎಂ.ಸೋಮಶೇಖರಪ್ಪ, ಈ.ವಿಶ್ವಾಸ್, ಹಾಗೂ ಉಮೇಶ್ ಆರಾಧ್ಯ ಉಪಸ್ಥಿತರಿರುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ, ಶ್ರೀಗಂಧದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಈ.ವಿಶ್ವಾಸ್, ಹೆಚ್.ಎಂ. ಸತ್ಯನಾರಾಯಣ, ಶ್ರೀಕಾಂತ್, ವೆಂಕಟೇಶ್, ಸೋಮಣ್ಣ, ಪುಷ್ಪ, ಪುನೀತ್, ಯಶೋಧರ, ವಿನುತಾ, ಮಹೇಶ್, ಲಿಂಗಮೂರ್ತಿ, ಸುಧೀಂದ್ರ ಮೊದಲಾದವರಿದ್ದರು.