ಶಿವಮೊಗ್ಗ: ನಗರಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ಇಂದು ಚುನಾವಣೆ ನಡೆಯಲಿದೆ. ಇದಕ್ಕೆ ಸಕಲ ಸಿದ್ದತೆಯು ನಡೆದಿದೆ. ಈ ಮಧ್ಯೆ ಬಿಜೆಪಿಯು ಬಹುಮತ ಹೊಂದಿರುವುದರಿಂದ ಅದೇ ಪಕ್ಷದವರು ಮೇಯರ್, ಉಪಮೇಯರ್ ಆಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.
ಈ ಬಾರಿ ಮೀಸಲಾತಿಯು ಸಾಮಾನ್ಯ ಮಹಿಳೆ ಮತ್ತು ಉಪಮೇಯರ್ ಸಾಮಾನ್ಯರಿಗೆ ಮೀಸಲಾಗಿದೆ. ಇದರಿಂದ ಮೂರು ಬಾರಿ ೨೯ನೆಯ (ಕೆ. ಆರ್. ಪುರಂ) ವಾರ್ಡಿನಿಂದ ಆಯ್ಕೆಯಾಗಿರುವ ಸುನೀತಾ ಅಣ್ಣಪ್ಪ ಮೇಯರ್ ಆಗುವುದು, ಉಪಮೇಯರ್ ಆಗಿ ೩೦ನೆಯ (ಸೀಗೇಹಟ್ಟಿ) ವಾರ್ಡಿನ ಶಂಕರ್ ಗನ್ನಿ ಆಯ್ಕೆ ಕೂಡ ಖಚಿತ ಎನ್ನಲಾಗುತ್ತಿದೆ.
ಹಾಲಿ ಪಾಲಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರೇ ನಿಯಂತ್ರಣದಲ್ಲಿ ಟ್ಟುಕೊಂಡಿದ್ದಾರೆ. ಇದರಿಂದ ತಮ್ಮ ಆಪ್ತ ಮತ್ತು ಬೆಂಬಲಿಗರಿಗೆಲ್ಲ ಕಳೆದ ಎರಡು ಬಾರಿ ಮೇಯರ್, ಉಪಮೇಯರ್ ಸ್ಥಾನ ಕೊಡಿಸಿದ್ದಾರೆ. ಮೊದಲನೆ ಬಾರಿ ಎಸ್ಸಿಗೆ ಸೇರಿದ ಲತಾ ಗಣೇಶ್ ಮತ್ತು ಎರಡನೆಯ ಬಾರಿಗೆ ಸುವರ್ಣಾ ಶಂಕರ್ ಮೇಯರ್ ಆಗಿ ಚನ್ನಬಸಪ್ಪ ಮತ್ತು ಸುರೇಖಾ ಮರುಳೀಧರ್ ಉಪಮೇಯರ್ ಆಗಿ ಕ್ರಮವಾಗಿ ಮೊದಲ ಮತ್ತು ಎರಡನೆಯ ಬಾರಿಗೆ ಕೆಲಸ ಮಾಡಿದ್ದಾರೆ.
ಈ ಬಾರಿ ಪುರುಷರು ಮೇಯರ್ ಆಗುತ್ತಾರೆಂದು ಊಹಿಸಲಾಗಿತ್ತಾದರೂ ಅದು ಸುಳ್ಳಾಗಿದೆ. ಈಶ್ವರಪ್ಪ ಅವರ ಆಪ್ತರಾದ ಜ್ಞಾನೇಶ್ವರ್ ಮತ್ತು ಚನ್ನಬಸಪ್ಪ ಈ ಇಬ್ಬರ ಹೆಸರು ಮುನ್ನೆಲೆಗೆ ಬಂದಿತ್ತು. ಈ ಮಧ್ಯೆ ಜ್ಞಾನೇಶ್ವರ್ ಅವರ ವಿರುದ್ದ ಲೋಕಾಯುಕ್ತ ಪ್ರಕರಣದ ತೀರ್ಪು ಬಂದಿದ್ದು, ಅವರು ಯಾವುದೇ ಸಾರ್ವಜನಿಕ ಹುದ್ದೆ ನಿಭಾಯಿಸಬಾರದೆಂದು ಸೂಚಿಸಿರುವುದರಿಂದ ಅವರನ್ನು ದೂರವಿಡಲಾಗಿದೆ ಎನ್ನುವ ಮಾತು ಬಿಜೆಪಿ ನಾಯಕರಿಂದ ಕೇಳಿಬಂದಿದೆ. ಮುಂದಿನ ಅವಧಿಗೆ ಚನ್ನಬಸಪ್ಪ ಮೇಯರ್ ಆಗುವ ಅವಕಾಶ ದೊರಕಿಸಿಕೊಡುವ ಕಾರಣದಿಂದ ಸುನೀತಾ, ಶಂಕರ್ಗೆ ಮಣೆ ಹಾಕಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಮೈಸೂರು ಪ್ರವಾಸ: ಈ ಮಧ್ಯೆ ಬಿಜೆಪಿಯ ಸದಸ್ಯರೆಲ್ಲ ಮೈಸೂರು ಪ್ರವಾಸಕ್ಕೆ ಮೊನ್ನೆಯೇ ತೆರಳಿದ್ದಾರೆ. ನಾಳೆ ಮತದಾನದ ವೇಳೆ ಪಾಲಿಕೆಗೆ ಅವರು ಆಗಮಿಸಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೇಯರ್ ಮತ್ತು ಉಪಮೇ ಯರ್ಗೆ ಉಮೇದುವಾರರನ್ನು ನಿಲ್ಲಿಸಲಿವೆ ಎನ್ನಲಾಗಿದೆ. ಆದರೆ ಖಚಿತವಾಗಿ ಉಮೇದುವಾರರು ಯಾರೆನ್ನುವುದು ಗೊತ್ತಾಗಿಲ್ಲ. ಇಬ್ಬರೂ ಸೇರಿದರೂ ಬಹುಮತ ಇರದಿರುವುದರಿಂದ ಬಿಜೆಪಿಗೆ ಅನಾಯಾಸವಾಗಿ ಎರಡೂ ಹುದ್ದೆ ದಕ್ಕುವುದು ನಿಶ್ಚಿತವಾಗಿದೆ.
ಪಾಲಿಕೆಯಲ್ಲಿ ಒಟ್ಟೂ ೩೧ ಸದಸ್ಯರಿದ್ದು, ಇದರಲ್ಲಿ ಜೆಡಿಎಸ್ ೧, ಕಾಂಗ್ರೆಸ್ ೭ ಮತ್ತು ಬಿಜೆಪಿ ೨೧ (ಪಕ್ಷೇತರನನ್ನು ಸೇರಿ) ಸ್ಥಾನ ಗಳಿಸಿವೆ. ಜೊತೆಗೆ, ಶಾಸಕರ, ಸಂಸದರ ಮತಗಳಿವೆ.
ಚುನಾವಣೆ ಮಧ್ಯಾಹ್ನ ೧ ಗಂಟೆಗೆ ಚುನಾವಣಾಧಿಕಾರಿಯಾಗಿರುವ ಬೆಂಗಳೂರು ವಿಭಾಗಾಧಿಕಾರಿ ನವೀನ್ರಾಜ್ ಸಿಂಗ್ ಅವರ ವಿಚಕ್ಷಣೆಯಲ್ಲಿ ನಡೆಯಲಿದೆ.
