

ಮುರುಕಲು ಮನೆಯಲ್ಲಿದ್ದವನೀಗ ಎತ್ತುವಳಿ ಮಾಡ್ತಾ “ಸೋತೇ” ಶ್ರೀಮಂತನಾದ…!
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 36
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ – ಅರಹತೊಳಲು, ಭದ್ರಾವತಿ)
ನಮ್ಮ ನಡುವೆ ಯಾವುದೇ ಸಂಘ ಸಂಸ್ಥೆ, ಸರ್ಕಾರಿ ವ್ಯವಸ್ಥೆಯಲ್ಲಿನ ವಿಭಾಗಗಳಲ್ಲಿ ಆಡಳಿತ ಮಂಡಳಿಯ ಪ್ರತಿನಿಧಿಯಾಗಿಸಲು ಚುನಾವಣೆ ಮಾಮೂಲಿಯಾಗಿ ನಡೆಯುತ್ತದೆ ಅಲ್ಲವೇ. ಕೆಲವರು ಕಷ್ಟಪಟ್ಟು ಇದ್ದದನ್ನೆಲ್ಲ ಮಾರಿ ಗೆಲ್ಲಲು ಹರ ಸಾಹಸ ಪಡುತ್ತಾರೆ. ಮತ್ತೆ ಕೆಲವರು ಸೋಲುತ್ತೇನೆ ಎಂಬುದು ಗೊತ್ತಿದ್ದರೂ ಸಹ ಅದೇ ಹೆಸರಲ್ಲಿ ಎತ್ತುವಳಿ ದಂದೆ ಮಾಡುತ್ತಾ ಸದ್ದಿಲ್ಲದೆ ಶ್ರೀಮಂತರಾಗುವ, ಶ್ರೀಮಂತರಾಗಿರುವ ಸುದ್ದಿ ಮಾಮೂಲಿಯಾಗಿದೆ ಅಲ್ಲವೇ?

ಅಂತೆಯೇ ಕೆಲವರಿಗೆ ಎಲೆಕ್ಷನ್ ಎಂಬುದು ಕಾಸು ಮಾಡುವ ಅಸ್ತ್ರ ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಹಾಗೆಯೇ ಪಾಲಿಕೆ ಚುನಾವಣೆಗಳು ಈಗ ಅತ್ಯಂತ ಚಿತ್ರ ವಿಚಿತ್ರವಾಗಿ ಹೊಸತನವನ್ನು ಕಾಣುತ್ತಿವೆ.

ಇಲ್ಲಿ ಕಾಸಿದ್ದವನಷ್ಟೇ ಸ್ಪರ್ಧಿಸಬಹುದು ಎಂಬ ಮಾತು ಈಗ ಜನಜನಿತವಾಗಿದೆ. ಜನರ ಪ್ರೀತಿ ವಿಶ್ವಾಸ ಮತದಾರನಾದ ತಕ್ಷಣ ಕಾಸಿಗೆ, ಕುಡಿತಕ್ಕೆ, ಬಾಡೂಟಕ್ಕೆ ಮರ್ಜಿಯಾಗುತ್ತಿರುವುದು ದುರಂತವೇ ಹೌದು. ಕೆಲವರು ಕಾಸಿಗಾಗಿ ಚುನಾವಣೆ ಸಮಯದಲ್ಲಿ ಮತದಾನ ಮಾಡುವುದು ನಮ್ಮ ನಡುವಿನ ನೋವಿನ ಸಂಗತಿ.

ಇದರ ನಡುವೆ ಕೆಲವೇ ಕೆಲವು ಬೆರಳೆಣಿಕೆಯ ಪಟ್ಟಭದ್ರ ಹಿತಾಸಕ್ತಿಯ ಮನಸ್ಸಿನ ವ್ಯಕ್ತಿಗಳು ಈ ಚುನಾವಣೆಯನ್ನು ಕಾಸು ಮಾಡುವ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ನಮಗೆ ಗೊತ್ತಿದ್ದರೂ ನಾವು ಮತ್ತೆ ಅಲ್ಲಿ ಹಳ್ಳಕ್ಕೆ ಬೀಳುತ್ತಿರುವುದು ಸತ್ಯವಲ್ಲವೇ? ಸಂಘ ಸಂಸ್ಥೆಗಳು ಅಂದರೆ ಸೊಸೈಟಿಗಳು, ಪರಿಷತ್ ಗಳು,ನಿಗಮ ಮಂಡಳಿಗಳ ಚುನಾವಣೆಗಳು ಸಹ ನಾಮನಿರ್ದೇಶಿತರನ್ನು ಹೊರತುಪಡಿಸಿ ಕಾಸಿನಲ್ಲಿಯೇ ಸೋಲು- ಗೆಲುವು ನಿರ್ಧಾರವಾಗುವ ಹಂತಕ್ಕೆ ತಲುಪಿರುವುದು ನಿಜಕ್ಕೂ ಆತಂಕದ ಸಂಗತಿಯೇ ಹೌದು .
ಇದೇ ಹೆಸರಲ್ಲಿ ಯಾವುದೇ ಚುನಾವಣೆ ಬರಲಿ ಅಲ್ಲಿ ನಿಂತಂತೆ ಮಾಡಿ ಒಂದಿಷ್ಟು ತಿರುಗಿದಂತೆ ಮಾಡಿ,ಪ್ರೀತಿ ವಿಶ್ವಾಸದ ಹೆಸರಲ್ಲಿ ಪರ್ಸನಲ್ ಬೇಕಿದ್ದವರಿಂದ ಒಂದಿಷ್ಟು ಕೂಡಿಟ್ಟುಕೊಂಡು ಕೆಲವೆಡೆ ಬ್ಲಾಕ್ ಮೇಲ್ ದಂಧೆ ಮೂಲಕ ಇಂತಹ ಚುನಾವಣೆಗಳನ್ನು ಮಾಡಲು ಅಗತ್ಯದ ಕಾಸು ಮತ್ತಿತರ ಸಾಮಗ್ರಿಗಳನ್ನು ಅಂದರೆ ವಾಹನ, ಎಣ್ಣೆ ಇತರೆ ವಸ್ತುಗಳನ್ನು ಪಡೆಯುವುದು ಸಾಮಾನ್ಯವಾಗಿದೆ.
ಚುನಾವಣೆ ಇಲ್ಲಿ ಕಾಸು ಮಾಡುವ ದಂದೆಯಾಗಿರುವುದು ದುರಂತವೇ ಹೌದು.
ನಾ ಕಂಡಂಗೆ ಮುರುಕಲು ಮನೆ, ಹರುಕಲು ಚಪ್ಪಲಿ, ಕಿತ್ತುಹೋದ ಜೀನ್ಸ್ ಪ್ಯಾಂಟ್, ಲಗಾಡಿಗಾಡಿಯಲ್ಲಿ ಓಡಾಡುತ್ತಿದ್ದವ ಈಗ 25 ರೂಪಾಯಿ ಮೀಟರ್ ನ ಖಾದಿ ಬಟ್ಟೆ ಹಾಕಿಕೊಂಡು ಎತ್ತುವಳಿ ಮಾಡುತ್ತಾ ಚುನಾವಣೆಯನ್ನು ತನ್ನ ಕಾಸಿನ ಅಸ್ತ್ರವನ್ನಾಗಿ ಮಾಡಿಕೊಂಡು, ಸೋಲನ್ನು ಸಹಜ ಎನ್ನುವಂತೆ ನಂತರದ ದಿನಗಳಲ್ಲಿ ಶ್ರೀಮಂತಿಕೆಯ ಆಟ ಆಡುತ್ತಿರುವುದು ನಮಗೆ ಅಸಹ್ಯ ಹುಟ್ಟಿಸುತ್ತದೆ ಎಂಬ ಮಾತನ್ನು ನೆಗೆಟಿವ್ ಥಿಂಕಿಂಗ್ ಅಂಕಣದ ಓದುಗರೊಬ್ಬರು ಬರೆದು ಕಳಿಸಿದ್ದು ವಿಶೇಷ ಅನಿಸಿತು.

ಹೌದು ಹಿಂದೆ ಏನು ಇಲ್ಲದವ ಈಗ ಇರೋ ಬರೋ ಎಲ್ಲಾ ಚುನಾವಣೆಗಳಲ್ಲಿ ನಿಂತು, ಸೋಲನ್ನು ಸಹಜವಾಗಿ ಸ್ವೀಕರಿಸಿ ಕೊನೆಯ ಹೊತ್ತಿನಲ್ಲಿ ಎದುರಾಳಿಯ ಜೊತೆ ಮಾತುಕತೆ ಮಾಡುತ್ತಾ, ಸದ್ದಿಲ್ಲದೆ ಸೈಲೆಂಟ್ ಆಗುವ ಈ ಗಿರಾಕಿಗಳು ಸದ್ದಿಲ್ಲದೆ ಕಾಸು ಮಾಡುತ್ತಿರುವುದು ಹಾಗೂ ಅದನ್ನು ಮುಂದಿನ ಬದುಕಿಗೆ ದಾರಿದೀಪ ಮಾಡಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ? ನಿಯತ್ತಾಗಿ ದುಡಿದ ನಾಕಾಣೆ ಹಣವೇ ಇರುವುದಿಲ್ಲ. ಅದು ಬದುಕೆಂಬ ಬಾರಕ್ಕೆ ಕರಗಿ ಹೋಗಿರುತ್ತದೆ. ಹೀಗೆ ಮೋಸ ಮಾಡಿ ವಂಚಿಸಿದ ಹಣ ಎಷ್ಟರಮಟ್ಟಿಗೆ ಇವನ ಹೆಣದ ಜೊತೆ ಹೋಗಲು ಸಾಧ್ಯ ಎಂಬುದು ಸಹಜವಾದ ಪ್ರಶ್ನೆ?
ಮತ್ತೊಂದು ವಿಶೇಷವೆಂದರೆ ಮನುಷ್ಯ ಸಹಜ ಗುಣ ಇಲ್ಲದಿರುವವರು ಹೇಗೆ ತಾನೇ ವರ್ತಿಸಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿ ನಿಂತ ಕಥನ ಒಂದನ್ನು ತಮಗೆ ಹೇಳಲೇಬೇಕು. ಅನಿವಾರ್ಯವಾಗಿ ಆತ್ಮೀಯರೊಬ್ಬರ ಅಗಲಿಕೆಯ ಹೊತ್ತಿನಲ್ಲಿ ಕೈಲಾದ ಸಹಾಯಕ್ಕೆ ಮುಂದಾಗದಾಗ ಹಣವಿಲ್ಲದೆ ತಾನು ಹಿಂದೆ ಕೊಟ್ಟದ್ದು ನೆನಪಾಗಿ ಒಂದು ಸಹಜವಾದ ಮಾಹಿತಿ ಮಾಹಿತಿಯನ್ನು ಹಿಂದೆ ಕೊಟ್ಟವರಿಗೆ ಕಳುಹಿಸಿದರಂತೆ. ಅದರಲ್ಲಿ ಒಂದಿಬ್ಬರು ಈಗ ಆಗುವುದಿಲ್ಲ ಸದ್ಯದಲ್ಲೇ ಕೊಡುತ್ತೇನೆ ಎಂದರೆ ಮತ್ತೊಂದು ಇಷ್ಟು ಜನ ಅತ್ತ ತಿರುಗಿಯೂ ನೋಡಲಿಲ್ಲ. ಅಂದರೆ ಅವರು ಅದೆಷ್ಟರ ಮಟ್ಟಿಗೆ ನಾಚಿಕೆ, ಮಾನ, ಮರ್ವಾದೆ ಬಿಟ್ಟಿದ್ದಾರೆ. ಅವರನ್ನು ನೆನೆಸಿಕೊಂಡು ಅವರಿಂದ ನಮ್ಮ ಹಣ ಬರುತ್ತದೆ ಎಂದು ಕನಸು ಕಂಡರೆ ನಮ್ಮಷ್ಟು ಮೂರ್ಖರು ಯಾರು ಇರುವುದಿಲ್ಲ ಅಲ್ಲವೇ?







ಈ ಜಗತ್ತಿನಲ್ಲಿ ಇಂತಹ ನಯವಂಚಕ ಮನಸ್ಸಿನ ಇಂತಹ ಗುಳ್ಳೆ ನರಿಗಳನ್ನು ಯಾರು ನಂಬಬೇಡಿ, ಕಷ್ಟಕ್ಕೆ ಆಗದವನು ಸ್ನೇಹಿತನಲ್ಲ, ಹಾಗೆಯೇ ಕೊಟ್ಟದ್ದನ್ನು ಕೊಡದವನು ಪಡೆದವನ ಅದನ್ನು(?) ತಿಂದವನು ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಅಲ್ಲವೇ?