ಸಾಗರ : ಹಿಂದೂ ದೇವಾಲಯಗಳ ಕೋಟ್ಯಾಂತರ ರೂಪಾಯಿ ನಿಧಿ ಲೂಟಿ ಮಾಡಿರುವ ಅಧಿಕಾರಿಗಳ ವಿರುದ್ದ ಸೂಕ್ತಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ಮಂದಿರ ಮಹಾಸಂಘದ ಸ್ಥಳೀಯ ಶಾಖೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲವು ಅಧಿಕಾರಿಗಳು ದೇವಸ್ಥಾನಗಳಿಗೆ ಸೇರಬೇಕಾದ ಕೋಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ ಎನ್ನುವ ಚರ್ಚೆ ವ್ಯಾಪಕವಾಗಿದೆ. ಹಿಂದೂ ದೇವಾಲಯಗಳ ಕೋಟ್ಯಾಂತರ ರೂಪಾಯಿ ಆದಾಯ ಲೂಟಿ ಹೊಡೆದು ವಂಚಿಸುವ ಕೆಲಸ ಮಾಡುತ್ತಿರುವ ಅಧಿಕಾರಿಗಳ ಕ್ರಮವನ್ನು ನಮ್ಮ ಸಂಘಟನೆ ತೀವೃವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ದೊಡ್ಡ ಬಳ್ಳಾಪುರದ ಸಾಸಲು ಹೋಬಳಿಯ ರೆವಿನ್ಯೂ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ಎಂಬಾತ ಇಬ್ಬರು ತಹಸೀಲ್ದಾರರು ಮತ್ತು ಒಬ್ಬ ಕೇಸ್ವರ್ಕರ್ ಸಹಿ ಮುದ್ರೆ ನಕಲಿ ಮಾಡಿ ಧಾರ್ಮಿಕ ದತ್ತಿ ಇಲಾಖೆಯ ೬೦ ಲಕ್ಷ ರೂಪಾಯಿಗಳನ್ನು ತನ್ನ ಹೆಂಡತಿ ಮತ್ತು ಸಂಬಂಧಿಕರ ಹೆಸರಿಗೆ ವರ್ಗಾವಣೆ ಮಾಡಿದ್ದಾನೆ. ಲಿಂಗಸುಗೂರು ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಯಲ್ಲಪ್ಪ ಎಂಬಾತ ದೇವಸ್ಥಾನಗಳ ಅರ್ಚಕರಿಗೆ ಮೀಸಲಿಟ್ಟ ೧.೮೭ ಕೋಟಿ ರೂ. ತನ್ನ ಹೆಂಡತಿ ಮಕ್ಕಳ ಹೆಸರಿಗೆ ನಕಲಿ ಬ್ಯಾಂಕ್ ಖಾತೆ ತೆರೆದು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ಮನವಿಯಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿ ಹಿಂದೂ ದೇವಾಲಯದ ಆದಾಯವನ್ನು ಲೂಟಿ ಮಾಡುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾದವರ ವಿರುದ್ದ ಸೂಕ್ತ ಕಾನೂನುಕ್ರಮ ರಚಿಸಬೇಕು. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ನೇಮಿಸಬೇಕು. ತಪ್ಪಿತಸ್ತ ಅಧಿಕಾರಿಗಳನ್ನು ಅಮಾನತ್ತು ಮಾಡಿ ಬಂಧಿಸಬೇಕು. ಹಿಂದೂ ದೇವಾಲಯಗಳಿಂದ ಬರುವ ಆದಾಯವನ್ನು ದೇವಾಲಯಗಳ ಅಭಿವೃದ್ದಿ, ಧರ್ಮ ಪ್ರಸಾರಕ್ಕೆ ಉಪಯೋಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ರಘುನಾಥ್, ಆನಂದ ಬಾಳೆಕೊಪ್ಪ ಮಾತನಾಡಿದರು. ಸತ್ಯನಾರಾಯಣ ಶೆಟ್ಟಿ, ಸೂರ್ಯನಾರಾಯಣ, ಗಣಪತಿ ಭಟ್, ಮೋಹನ್ ಶೇಟ್, ಶ್ರೀಧರ್, ಬಂಗಾರೇಶ್ವರ, ಶಂಕರಾಚಾರ್ಯ, ಕೆ.ಮಂಜುನಾಥ್, ಶ್ರೀಪಾದ್ ಜಿ., ಭೋಜಕುಮಾರ್, ಕುಂಟಗೋಡು ಸೀತಾರಾಮ್, ಕೃಷ್ಣ ಆರ್. ಶೇಟ್ ಇನ್ನಿತರರು ಹಾಜರಿದ್ದರು.