
|
ಶಿವಮೊಗ್ಗ (ಬಿ.ಆರ್.ಪ್ರಾಜೆಕ್ಟ್): ಯಾವುದೇ ಸಮಾಜಮುಖಿ ಯೋಜನೆಗಳ ಅನುಷ್ಟಾನ ಮತ್ತು ನಿರ್ವಹಣೆಯ ಯಶಸ್ಸಿಗೆ ಪ್ರಾದೇಶಿಕ ಶಕ್ತಿ ಕಾಳಜಿಯ ಸಹಭಾಗಿತ್ವ ಅತ್ಯವಶ್ಯಕ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಎನ್ಇಎಸ್ ಸಂಸ್ಥೆ ಹಾಗೂ ರೋಟರಿ ಕ್ಲಬ್ ವತಿಯಿಂದ ರೋಟರಿ ಜಾಗತಿಕ ಅನುದಾನದಲ್ಲಿ ನವೀಕರಣಗೊಂಡಿರುವ ಬಿ.ಆರ್.ಪ್ರಾಜೆಕ್ಟ್ ರಾಷ್ಟ್ರೀಯ ಸಂಯುಕ್ತ ಪದವಿಪೂರ್ವ ಕಾಲೇಜನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸೇವಾ ಮನೋಭಾವ ಹೊಂದಿದ ಸಮಾನ ಮನಸ್ಕರರು ರೋಟರಿಯಂತಹ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಸಮಾಜದ ಬೆಳವಣಿಗೆಗೆ ಅವರೆಲ್ಲ ತೋರುತ್ತಿರುವ ಕಾಳಜಿ ಪ್ರೇರಣೀಯ. ಅಂತಹ ಪ್ರೇರಣೆಯ ಸಹಭಾಗಿತ್ವಗಳು ಮತ್ತಷ್ಟು ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ. ಬಿ.ಆರ್.ಪಿ ವಿದ್ಯಾಸಂಸ್ಥೆಯು ಸೇರಿದಂತೆ ಮೂರು ಶಾಲಾ ಕಾಲೇಜುಗಳನ್ನು ರೋಟರಿಯ ಸಹಭಾಗಿತ್ವದ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಹೇಳಿದರು.

ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಸಹಕಾರ ಕ್ಷೇತ್ರಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭ್ಯುದಯ ಸಾಧ್ಯ. ಪುಸ್ತಕ ಮಾತ್ರ ಅಕ್ಷರವಲ್ಲ ನಮ್ಮ ಮಾತು ಕೂಡ ಅಕ್ಷರವೆ ಆಗಿದೆ. ಉತ್ತಮ ವ್ಯಕ್ತಿತ್ವ ಮಾತ್ರ ಜೀವನದಲ್ಲಿ ಅಗ್ರಸ್ಥಾನ ಪಡೆಯಲು ಸಾಧ್ಯವಾಗಲಿದ್ದು, ವ್ಯಕ್ತಿತ್ವಗಳ ನಿಜವಾದ ನಿರೂಪಣೆ ನಡೆಯುವುದು ಶಾಲೆಗಳಲ್ಲಿ ಮಾತ್ರ. ನಿಮ್ಮನ್ನು ಹಿಯಾಳಿಸಿದ ಜನಗಳಿಗೆ ಬೆರಳು ಮಾಡಿ ತೋರಿಸುವುದಕ್ಕಿಂತ, ಬದುಕಿನಲ್ಲಿ ಯಶಸ್ವಿಯಾಗಿ ಬೆಳೆದು ತೋರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ ಮಾತನಾಡಿ, ಈ ವರ್ಷ ‘ಮ್ಯಾಜಿಕ್ ಆಫ್ ರೋಟರಿ’ ಎಂಬ ಧ್ಯೇಯ ವಾಕ್ಯದಲ್ಲಿ ಸಮಾಜದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯವನ್ನು ವಿಶ್ವದಾದ್ಯಂತ ರೋಟರಿ ಕ್ಲಬ್ ಗಳು ಕಾರ್ಯನಿರ್ವಹಿಸುತ್ತಿದೆ. ರೋಟರಿ ಅನುಷ್ಟಾನಗೊಳಿಸುತ್ತಿರುವ ಇಂತಹ ಯೋಜನೆಗಳನ್ನು ಯುವ ಸಮೂಹ ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ನಿಜವಾದ ಸಾರ್ಥಕತೆ ಸಾಧ್ಯ ಎಂದು ಹೇಳಿದರು.

ಭದ್ರಾವತಿ ಬಿಇಓ ನಾಗೇಂದ್ರಪ್ಪ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರು ಕೂಡ, ಅಂತಹ ಶಾಲೆಗಳನ್ನು ಉನ್ನತಿಕರಣಗೊಳಿಸುವಲ್ಲಿ ರೋಟರಿ ಹಾಗೂ ಎನ್ಇಎಸ್ ನಂತಹ ಅನೇಕ ಸಂಘ ಸಂಸ್ಥೆಗಳ ಕಾಳಜಿ ಕಾರಣ. ಸ್ವಾತಂತ್ರ್ಯ ಪೂರ್ವದಲ್ಲಿಯೆ ಎನ್ಇಎಸ್ ಸಂಸ್ಥೆ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿ, ಇಂದಿನವರೆಗೂ ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
*************
ಯುಎಸ್ಎ ವೆಸ್ಟ್ ಸ್ಪ್ರಿಂಗ್ ಫೀಲ್ಡ್ ನಿಂದ ಅನುದಾನ
ಬಿ.ಆರ್.ಪಿ ಕಾಲೇಜನ್ನು ನವೀಕರಣಗೊಳಿಸಲು ರೋಟರಿಯಿಂದ ಬಂದಿರುವ ಜಾಗತಿಕ ಅನುದಾನವು ಅಮೇರಿಕಾದ ವೆಸ್ಟ್ ಸ್ಪ್ರಿಂಗ್ ಫೀಲ್ಡ್ ರೋಟರಿ ಕ್ಲಬ್ ನಿಂದ ಬಂದಿದ್ದು, ಶಿವಮೊಗ್ಗ ರೋಟರಿಯ ಮೂಲಕ ಜಿಲ್ಲೆಯ ಬಿ.ಆರ್.ಪ್ರಾಜೆಕ್ಟ್ ತಲುಪಿದೆ. ರೋಟರಿಯ ಜಾಗತಿಕ ಅನುದಾನದ ಜೊತೆಗೆ ಎನ್ಇಎಸ್ ಸಂಸ್ಥೆ ಜಂಟಿಯಾಗಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಂಯುಕ್ತ ಕಾಲೇಜನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ತಿಳಿಸಿದರು.
ವಿದ್ಯಾಸಂಸ್ಥೆಯ ಕಟ್ಟಡವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ನವೀಕೃತ ಶೌಚಾಲಯಗಳು, ಪೀಠೋಪಕರಣಗಳು ಹಾಗೂ ಕಂಪ್ಯೂಟರ್ ಲ್ಯಾಬ್ ರೂಪಿಸಲಾಗಿದೆ. ಅಂದಿನ ಕೆಪಿಟಿಸಿಎಲ್ ಅಧಿಕಾರಿಗಳ ಮನವಿ ಮೇರೆಗೆ ಎನ್ಇಎಸ್ ಸಂಸ್ಥೆಯಿಂದ 1962 ರಲ್ಲಿ ಪ್ರಾರಂಭಗೊಂಡ ಶಾಲೆಯು ನಂತರ 1983 ರಲ್ಲಿ ಪಿಯು ಕಾಲೇಜಿನೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಪ್ರೇರಣೀಯ ವಾತಾವರಣ ನಿರ್ಮಾಣ ಮಾಡಿಕೊಟ್ಟಿದೆ ಎಂದು ಹೇಳಿದರು.
***************
ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷರಾದ ಸೂರ್ಯನಾರಾಯಣ ಉಡುಪ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಎನ್.ಜಿ.ಉಷಾ, ಯೋಜನಾ ಸಂಪರ್ಕಾಧಿಕಾರಿ ಎನ್.ವಿ.ಭಟ್, ವಸಂತ್ ಹೋಬಳಿಕರ್, ರಾಮದೇವ್ ಕಾರಂತ್, ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಕಾಲೇಜಿನ ಪ್ರಾಂಶುಪಾಲರಾದ ಅಂಜನಾಮೂರ್ತಿ, ಮುಖ್ಯೋಪಾಧ್ಯಾಯ ಭೈರಪ್ಪ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು.