ಶಿವಮೊಗ್ಗ, ಫೆ.14:
ಶಿವಮೊಗ್ಗ ವಿನೋಬನಗರದ ಅರವತ್ತು ಅಡಿ ರಸ್ತೆ ಚಾನೆಲ್ ಸೇತುವೆ ಪಕ್ಕದಲ್ಲಿರುವ ಶ್ರೀ ರತ್ತೇಶ್ವರಿ ಮತ್ತು ಮಳಲಿ ಗಿಡ್ಡಮ್ಮ ಸೇವಾ ಸಮಿತಿ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಸಂಭ್ರಮದ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ತಿಳಿಸಿದರು.

ಅವರು ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಫೆಬ್ರವರಿ 26ರ ಬುಧವಾರ ಬೆಳಗ್ಗೆ ಭ್ರಾಹ್ಮೀ ಮಹೂರ್ತದಲ್ಲಿ ಪಂಚಾಮೃತ ಅಭಿಷೇಕ ಹಾಗೂ ತೈಲಾಭಿಷೇಕ ಆಯೋಜಿಸಲಾಗಿದ್ದು, ಮಹಾಶಿವರಾತ್ರಿ ಪ್ರಯುಕ್ತ ಬೆಳಗ್ಗೆ 9:30ಕ್ಕೆ ಶಿವಲಿಂಗಕ್ಕೆ ಭಕ್ತಾದಿಗಳಿಂದ ಕ್ಷೀರಾಭಿಷೇಕ, ಪ್ರಸಾದ ವಿನಿಯೋಗ, ಸಂಜೆ ಏಳು ಗಂಟೆಗೆ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವನ್ನು 2006ರಲ್ಲಿ ನೂತನವಾಗಿ ಸ್ಥಾಪನೆ ಮಾಡಿದ್ದು, ಪ್ರತಿ ವರ್ಷ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ವಾರ್ಷಿಕ ಹಾಗೂ ನವರಾತ್ರಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ವರ್ಷ ವಿಶೇಷವಾಗಿ ಮಹಾಶಿವರಾತ್ರಿ ಆಚರಿಸಲು ಉದ್ದೇಶಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಭೀಮಣ್ಣ, ಉಪಾಧ್ಯಕ್ಷ ದಯಾನಂದ್ ಸಹ ಕಾರ್ಯದರ್ಶಿ ಧನಂಜಯ, ಖಜಾಂಚಿ ಶರತ್ ಚಂದ್ರ, ನಿರ್ದೇಶಕರುಗಳಾದ ದೀಪಕ್ ಸಿಂಗ್, ಕಿರಣ್, ಮುರುಳಿ ಹಾಗೂ ಇತರರು ಉಪಸ್ಥಿತರಿದ್ದರು.