ಶಿವಮೊಗ್ಗ: ಕುವೆಂಪು ವಿವಿ, ಜರ್ನಲ್ ಆಫ್ ಡೈಲಾಗ್ಸ್ ಆನ್ ನಾಲೆಡ್ಜ್ ಇನ್ ಸೊಸೈಟಿ ಚೆನ್ನೈ(ಸಮಾಜದಲ್ಲಿರುವ ಜ್ಞಾನ ಕುರಿತಾದ ಸಂವಾದಕ್ಕೆ ಮೀಸಲಾದ ನಿಯತಕಾಲಿಕೆ) ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ವಿವಿಯ ಬಸವ ಸಭಾ ಭವನದಲ್ಲಿ ಫೆ. ೨೦ರಿಂದ ೨೨ರವರೆಗೆ ’ಸಮಾಜದಲ್ಲಿ ಜ್ಞಾನ ಸಂವಾದ’ ಸಮಾವೇಶ ಆಯೋಜಿಸಲಾಗಿದೆ ಎಂದು ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ಜ್ಞಾನದ ವಿವಿಧ ಆಯಾಮಗಳ ಕುರಿತು ಚರ್ಚೆಯ ಅವಶ್ಯಕತೆ ಅನಿವಾರ್ಯವಾಗಿದೆ

. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಬಲವಾಗಿ ಬೆಳೆಯುತ್ತಿದೆ. ಆದರೆ ಈ ಜ್ಞಾನ ಎಲ್ಲರನ್ನೂ ತಲುಪದೇ ಒಂದು ಚೌಕಟ್ಟಿನ ಮಿತಿಯೊಳಗಿದೆ. ಯಾವುದು ಜ್ಞಾನ ಎಂಬ ಜಿಜ್ಞಾಸೆಯ ಜೊತೆಗೆ ಅದು ತಲುಪುವ ವೇಗವೂ ಕೂಡ ಪರಂಪರೆಯ ಜೊತೆಗೆ ಸಾಗಿ ನಮ್ಮ ಸಹಜ ಪರಂಪರೆಗಳು ಆಧುನಿಕ ತಂತ್ರಜ್ಞಾನದ ಜ್ಞಾನ ಶಾಖೆಯ ವ್ಯಾಪ್ತಿಯಲ್ಲಿ ಬರುತ್ತಿಲ್ಲ. ಹೀಗಾಗಿ ಜ್ಞಾನದ ವಿಸ್ತರಣೆ ಮತ್ತು ಈ ಕುರಿತು ಪ್ರಯೋಗಶೀಲವಾಗಿಯಾದರೂ ಒಂದು ಸಂವಾದ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಈ ಸಂವಾದವನ್ನು ಆಯೋಜಿಸಲಾಗಿದೆ ಎಂದರು.
ಪ್ರಮುಖವಾಗಿ ಈಗ ಕೃತಕ ಬುದ್ಧಿಮತ್ತೆ(ಎಐ) ಬಲವಾಗಿ ಬೆಳೆಯುತ್ತಿದೆ. ಇದು ಬಲಿಷ್ಠರ ಕೈಯಲ್ಲಿ ಇರುವುದರಿಂದ ಸಾಮಾನ್ಯರನ್ನು ತಲುಪದೇ ಹೋಗುತ್ತಿದೆ. ಮತ್ತು ಇದಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟುಗಳು ಕೂಡ ಪರಿಣಾಮಕಾರಿಯಾಗಿ ಉದ್ಭವಿಸತೊಡಗಿವೆ. ಈ ವಿಚಾರವನ್ನೂ ಇಟ್ಟುಕೊಂಡು ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವಂತೆ ರಾಷ್ಟ್ರ ನಿರ್ಮಾಣಕ್ಕೆ ಅನುಕೂಲವಾಗುವಂತೆ ನಮ್ಮ ಜ್ಞಾನದ ಶಾಖೆ ವಿಸ್ತರಿಸಬೇಕು ಎಂದರು.
ಕೃಷಿ, ನೀರಾವರಿ, ಜವಳಿ, ಗುಡಿ ಕೈಗಾರಿಕೆ, ವಸತಿ, ಸಾರಿಗೆ, ಆಹಾರ, ಸಾಮಾಜಿಕ ಸಂಘಟನೆ, ಕಲೆ, ಕುಟುಂಬ ಈ ಮುಂತಾದ ಅನೇಕ ವಿಷಯಗಳು ನಮ್ಮ ಆಧುನಿಕ ಜ್ಞಾನದ ಕೇಂದ್ರೀಕೃತವಾಗಿದೆ. ಈ ಎಲ್ಲಾ ವಿಷಯಗಳನ್ನು ಮುಕ್ತ ಸಂವಾದದ ರೀತಿಯಲ್ಲಿ ಚರ್ಚಿಸಬೇಕಾಗಿದೆ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಜ್ಞಾನದ ಆಯ್ಕೆಗಳ ಬಗ್ಗೆ ವಿಚಾರ ವಿನಿಮಯಕ್ಕಾಗಿ ಈ ಸಮಾವೇಶ ಆಯೋಜಿಸಿದ್ದು, ಈ ಸಮಾವೇಶದಲ್ಲಿ ದೇಶದ ವಿವಿಧ ವಿಭಾಗಗಳ ಗಣ್ಯರು, ರೈತರು, ಕಲಾವಿದರು, ತಜ್ಞರು, ಕುಶಲಕರ್ಮಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರು, ವಿದ್ವಾಂಸರು, ಸಂಗೀತಗಾರರು, ಅಲೆಮಾರಿಗಳು ಹೀಗೆ ವಿಭಿನ್ನ ಕ್ಷೇತ್ರದಲ್ಲಿರುವವರು ಮೂರು ದಿನಗಳ ಕಾಲವೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸಲಿದ್ದಾರೆ.
ಸಮಾವೇಶದ ಸಂಯೋಜಕ ಪ್ರೊ. ಮೇಟಿ ಮಲ್ಲಿಕಾರ್ಜುನ್ ಮಾತನಾಡಿ, ಈ ಸಮಾವೇಶಕ್ಕಾಗಿ ಸುಮಾರು ೬ ತಿಂಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ೮ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ೬೪ಕ್ಕೂ ಹೆಚ್ಚು ವಿದ್ವಾಂಸರು, ಚಿಂತಕರು ಇದರಲ್ಲಿ ಭಾಗವಹಿಸಲಿದ್ದಾರೆ. ಆ ಮೂಲಕ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ವಿಷಯಗಳತ್ತ ಸಂವಾದ ನಡೆಯಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಆಯ್ಕೆಗಳು ಸೇರಿದಂತೆ ಜ್ಞಾನದ ಆಯ್ಕೆಗಳು, ಅದರ ಕಾರಣಗಳು ವಿವಿಧ ಕ್ಷೇತ್ರಗಳಲ್ಲಿ ಫಲಿತಾಂಶಗಳ ಮೇಲೆ ಅವುಗಳ ಪ್ರಭಾವವನ್ನು ಪರಿಶೀಲಿಸುವುದು ಸಮಾವೇಶದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

ಫೆ. ೨೦ರಂದು ಸಮಾಜದಲ್ಲಿನ ಜ್ಞಾನ ಸಮಾನ ಮತ್ತು ನ್ಯಾಯಯುತ ಸಮಾಜಕ್ಕೆ ಅಡಿಪಾಯ, ಬಡತನ ಮತ್ತು ಜ್ಞಾನದ ಪ್ರಶ್ನೆ, ಕನ್ನಡದ ಜ್ಞಾನ ಸಂಪ್ರದಾಯಗಳ ಕುರಿತು ವಿಚಾರಗೋಷ್ಠಿಗಳಿದ್ದರೆ, ಫೆ. ೨೧ ರಂದು ೨೧ನೇ ಶತಮಾನದಲ್ಲಿ ಸ್ವರಾಜ್ಯವನ್ನು ಕಲ್ಪಿಸಿಕೊಳ್ಳುವುದು, ಜ್ಞಾನದ ಸಮಸ್ಯೆ ಕುರಿತು ಹಾಗೂ ಅಭಿವೃದ್ಧಿ ಪ್ರವಚನ, ಜನರ ಚಳವಳಿಯಲ್ಲಿ ಜ್ಞಾನ ಕುರಿತು ಹಾಗೂ ಕೃತಕ ಬುದ್ಧಿಮತ್ತೆ, ಕಲೆ ಮತ್ತು ಜ್ಞಾನ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಫೆ. ೨೨ರಂದು ಭಾರತವು ಜಾಗತಿಕ ದಕ್ಷಿಣದಿಂದ ಧ್ವನಿಯಾಗಿ ಜ್ಞಾನದ ಆಯಾಮ ಕುರಿತು ವಿಚಾರಗೋಷ್ಠಿ ನಡೆಯಲಿದೆ. ವಿಚಾರ ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳೆಲ್ಲವನ್ನೂ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು.
ಸಮಾವೇಶದ ಸಂಯೋಜಕ ಪ್ರೊ. ರಾಮಪ್ರಸಾದ್ ಮಾತನಾಡಿ, ಫೆ. ೨೦ರಂದು ಬೆಳಗ್ಗೆ ೧೦ ಗಂಟೆಗೆ ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯ ಬಸವ ಸಭಾ ಭವನದಲ್ಲಿ ನಡೆಯುವ ಸಮಾವೇಶವನ್ನು ಭಾಷಾ ಶಾಸ್ತ್ರಜ್ಞ ಮತ್ತು ಸಾಂಸ್ಕೃತಿಕ ಚಿಂತಕ ಪ್ರೊ.ಜಿ.ಎನ್. ದೇವಿ ಉದ್ಘಾಟಿಸಲಿದ್ದಾರೆ. ವಾರಣಾಸಿ ವಿದ್ಯಾಶ್ರಮದ ಡಿಕೆಎಸ್ ನಿಯತಕಾಲಿಕದ ಸುನಿಲ್ ಸಹಸ್ರಬುದ್ಧೆ ಆಶಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕುಲಸಚಿವರಾದ ಎ.ಎಲ್. ಮಂಜುನಾಥ್, ಎಸ್.ಎಂ. ಗೋಪಿನಾಥ್, ಹಣಕಾಸು ವಿಭಾಗದ ಅಧಿಕಾರಿ ಹೆಚ್.ಎನ್. ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಪ ಕುಲಪತಿ ಪ್ರೊ ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಟಿ. ಅವಿನಾಶ್, ಕನ್ನಡ ಪ್ರಾಧ್ಯಾಪಕ ಡಾ. ಪ್ರಕಾಶ್ ಮರ್ಗನಳ್ಳಿ, ಪಿಆರ್ಒ ಡಾ. ಸತ್ಯಪ್ರಕಾಶ್ ಇದ್ದರು.